
ದಾವಣಗೆರೆ: ಕುರಿಗಳ ಮೈ ತೊಳೆಯಲು ಕೆರೆಗೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಅವಳಿ ಸಹೋದರರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕ ಸಮರ್ಥ್ ಶಾಮನೂರು ಅವರು, ಮೃತದೇಹದ ಶೋಧಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ದುಃಖತಪ್ತ ಪೋಷಕರಿಗೆ ಸಾಂತ್ವನ ಹೇಳಿದರು.
ದಾವಣಗೆರೆ ತಾಲ್ಲೂಕಿನ ಬಟ್ಟಲಕಟ್ಟೆ ಗ್ರಾಮದ ಆನಂದಪ್ಪ ಅವರ ಅವಳಿ ಪುತ್ರರಾದ ದೇವರಾಜ್ (22) ಹಾಗೂ ಶಿವರಾಜ್ (22) ಮೃತಪಟ್ಟವರು.
ಕುರಿಗಳನ್ನು ಮೇಯಿಸಲು ತೆರಳಿದ್ದ ಸಹೋದರರು, ಅವುಗಳ ಮೈ ತೊಳೆಯಲು ಕೆರೆಗೆ ಇಳಿದಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಏಕಕಾಲದಲ್ಲಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ವಿಷಯ ತಿಳಿದ ಶಾಸಕ ಸಮರ್ಥ್ ಶಾಮನೂರು ಅವರು, ಮತ್ತೊಬ್ಬ ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಮೃತ ಯುವಕರ ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ದುರಂತದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ, ಮೃತ ಸಹೋದರರಿಗೆ ತಲಾ ₹2 ಲಕ್ಷದಂತೆ ಒಟ್ಟು ₹4 ಲಕ್ಷ ಪರಿಹಾರವನ್ನು ಎರಡು ವಾರಗಳೊಳಗೆ ಒದಗಿಸುವುದಾಗಿ ಶಾಸಕರು ತಿಳಿಸಿದರು. ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ಪೋಷಕರ ನೋವಿಗೆ ಸ್ಪಂದಿಸಿದ ಅವರು, ಸಂಕಷ್ಟದ ಸಂದರ್ಭದಲ್ಲಿ ಕುಟುಂಬದೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.
ಇಬ್ಬರು ಯುವಕರ ಅಕಾಲಿಕ ಸಾವು ಅತ್ಯಂತ ನೋವಿನ ಸಂಗತಿ. ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖವನ್ನು ಯಾವುದೇ ಪರಿಹಾರದಿಂದ ಭರಿಸಲು ಸಾಧ್ಯವಿಲ್ಲ. ಆದರೂ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸಿ ಆಸರೆಯಾಗುವುದು ತಮ್ಮ ಜವಾಬ್ದಾರಿಯಾಗಿದೆ ಎಂಬ ಆಶಯವನ್ನು ಶಾಸಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.




