ಕೋಲ್ಕತ್ತಾ / ನವದೆಹಲಿ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ ಅವರ ನಿಕಟವರ್ತಿ ಹಾಗೂ ಹತ್ಯೆಯಾದ ಅವರ ಮಾಜಿ ಆಪ್ತ ಸಹಾಯಕ (PA) ಚಂದ್ರನಾಥ್ ರಥ್ ಅವರ ತಾಯಿ ಹಾಸಿರಾಣಿ ರಥ್ ಅವರನ್ನು ಬಿಜೆಪಿ ನಂದಿಗ್ರಾಮದಿಂದ ಕಣಕ್ಕಿಳಿಸಿದೆ.
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಗಳಿಸಿದ ಬೆನ್ನಲ್ಲೇ, ಸುವೇಂಧು ಅಧಿಕಾರಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕೆಲವೇ ದಿನಗಳ ಮೊದಲು ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಾಸಿರಾಣಿ ರಥ್ ಅವರು ಪಂಚಾಯತ್ ಮಟ್ಟದ ರಾಜಕೀಯದಲ್ಲಿ 5 ಬಾರಿ ಗೆದ್ದು ಸುದೀರ್ಘ ಅನುಭವ ಹೊಂದಿದ್ದಾರೆ.
ಸಿಎಂ ಸುವೇಂಧು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ ಅವರು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು, ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ಎದುರಾಗಿದೆ.
ಅದೇ ರೀತಿ, ರಾಜ್ಯದ ಮತ್ತೊಂದು ಉಪಚುನಾವಣೆ ನಡೆಯಲಿರುವ ರೆಜಿನಗರ ಕ್ಷೇತ್ರಕ್ಕೆ ಮುರ್ಷಿದಾಬಾದ್ ಜಿಲ್ಲೆಯ ಮಾಜಿ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಸಮಿತಿ ಸದಸ್ಯ ಸಖರಾವ್ ಸರ್ಕಾರ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷವು ನಂದಿಗ್ರಾಮದಿಂದ ಸಂಚಿತಾ ಪ್ರಧಾನ್ (ಡೇ) ಮತ್ತು ರೆಜಿನಗರದಿಂದ ಮಾಜಿ ಶಾಸಕ ರಬಿಯುಲ್ ಆಲಂ ಚೌಧರಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ. ಇನ್ನು ಟಿಎಂಸಿ ಬಂಡಾಯ ಬಣ, ಕಾಂಗ್ರೇಸ್ ಮತ್ತು ಎಡಫ್ರಂಟ್ ಕೂಡ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ.
ಅಕ್ಟೋಬರ್ 6 ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಹೊರಬೀಳಲಿದೆ.





Leave a comment