ನವದೆಹಲಿ/ನಾಗ್ಪುರ: ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಲ್ಲದೆ, ಬೆದರಿಕೆ ಹಾಕಿದ್ದರಿಂದ ಮನನೊಂದ ಯುವತಿಯೊಬ್ಬಳು ವೀಡಿಯೋ ಕಾಲ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಘಟನೆ ನಡೆದ ವೇಳೆ ಆಕೆಯ ಪ್ರಿಯಕರ ವೀಡಿಯೋ ಕಾಲ್‌ನಲ್ಲಿ ಲೈವ್‌ನಲ್ಲಿದ್ದರೂ ಆಕೆಯನ್ನು ತಡೆಯಲು ಯಾವುದೇ ಪ್ರಯತ್ನ ಮಾಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ವಿವರ:
ನಾಗ್ಪುರದ ಧಂತೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಮೃತ ಯುವತಿ ನಾಗ್ಪುರದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಗೆಳತಿಯೊಂದಿಗೆ ವಾಸಿಸುತ್ತಿದ್ದಳು. ಅಮರಾವತಿ ಮೂಲದ ಯುವಕನೊಂದಿಗೆ ಈಕೆಗೆ ಹಲವು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಯುವಕ ಪ್ರಸ್ತುತ ಪುಣೆಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ.
ಕೆಲವು ತಿಂಗಳ ಹಿಂದೆ ಯುವಕ ತನ್ನ ಸ್ನೇಹಿತನೊಂದಿಗೆ ಯುವತಿಯ ತಾಯಿಯನ್ನು ಭೇಟಿಯಾಗಿ ಮದುವೆಯಾಗುವುದಾಗಿ ತಿಳಿಸಿದ್ದ. ಆದರೆ, ಆತನ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಆತ ಯುವತಿಯಿಂದ ಮುಚ್ಚಿಟ್ಟು, ನಾಗ್ಪುರದಲ್ಲಿ ಆಕೆಯನ್ನು ಭೇಟಿಯಾಗುವುದನ್ನು ಮುಂದುವರಿಸಿದ್ದ. ಆದರೆ ಯುವತಿ ಮದುವೆ ವಿಷಯ ಪ್ರಸ್ತಾಪಿಸಿದಾಗಲೆಲ್ಲಾ ಆತ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದ.
ಬ್ಲ್ಯಾಕ್‌ಮೇಲ್ ಹಾಗೂ ಬೆದರಿಕೆ:
ಇತ್ತೀಚೆಗೆ ಆತ ಮದುವೆಯಾಗಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದ. ಅಷ್ಟೇ ಅಲ್ಲದೆ, ಮದುವೆಗೆ ಒತ್ತಾಯಿಸಿದರೆ ಆಕೆಯ ವೈಯಕ್ತಿಕ/ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಯುವತಿಯ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಇದರಿಂದ ಯುವತಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು.
23 ನಿಮಿಷ ಚಾಲನೆಯಲ್ಲಿದ್ದ ಕಾಲ್:
ಸೆಪ್ಟೆಂಬರ್ 19 ರ ರಾತ್ರಿ ಯುವತಿ ತನ್ನ ಪ್ರಿಯಕರನಿಗೆ ವೀಡಿಯೋ ಕಾಲ್ ಮಾಡಿ, ತಾನು ಜೀವ ಕಳೆದುಕೊಳ್ಳುವುದಾಗಿ ಹೇಳಿದ್ದಾಳೆ. ಆದರೆ, ಕಾಲ್‌ನಲ್ಲಿದ್ದ ಯುವಕ ಆಕೆಯನ್ನು ಸಮಾಧಾನಪಡಿಸಲು ಅಥವಾ ತಡೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ ಎನ್ನಲಾಗಿದೆ. ವೀಡಿಯೋ ಕಾಲ್ ಚಾಲನೆಯಲ್ಲಿರುವಾಗಲೇ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಮೃತಪಟ್ಟ ನಂತರವೂ ಸುಮಾರು 23 ನಿಮಿಷಗಳ ಕಾಲ ಆ ವೀಡಿಯೋ ಕಾಲ್ ಚಾಲನೆಯಲ್ಲಿಯೇ ಇತ್ತು ಎಂಬ ಶಾಕಿಂಗ್ ಸತ್ಯ ತನಿಖೆಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿಯ ತಾಯಿ ನೀಡಿದ ದೂರಿನನ್ವಯ ಧಂತೋಲಿ ಪೊಲೀಸರು ಪ್ರಿಯಕರನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.





Leave a comment