ನಾಗ್ಪುರ/ಠಾಣೆ: ಅಕ್ರಮ ಸಂಬಂಧದ ವಿಚಾರ ತಿಳಿದಿದ್ದಕ್ಕೆ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪತಿಯನ್ನೇ ಸಂಚು ರೂಪಿಸಿ ಹತ್ಯೆ ಮಾಡಿಸಿದ್ದ ಆರೋಪಿ ಪತ್ನಿಯನ್ನು ಸುದೀರ್ಘ ಎರಡು ತಿಂಗಳ ಹುಡುಕಾಟದ ಬಳಿಕ ಠಾಣೆ ಪೊಲೀಸರು ಬಂದಿಸಿದ್ದಾರೆ.
ಬಂಧಿತ ಮಹಿಳೆಯನ್ನು ದೀಪಾಲಿ ಅಲಿಯಾಸ್ ಬಾಲಿ ವಿಜಯ್ ಸಾಳುಂಕೆ (29) ಎಂದು ಗುರುತಿಸಲಾಗಿದೆ. ನಾಗ್ಪುರದ ಅಜ್ನಿ ನಿವಾಸಿ, ಆಟೋ ಚಾಲಕ ಗೌರವ್ ರಾಗ್ಡೆ (27) ಕೊಲೆಯಾದ ದುರದೃಷ್ಟಕರ ಪತಿ.
ಘಟನೆಯ ವಿವರ:
ಗೌರವ್ ಮತ್ತು ದೀಪಾಲಿ ಎಂಟು ತಿಂಗಳ ಹಿಂದೆಯಷ್ಟೇ ಅಂತರ್ಜಾತಿ ಪ್ರೇಮ ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ದೀಪಾಲಿಗೆ ಋಷಿಕೇಶ್ ಖೋಡೆ ಎಂಬಾತನೊಂದಿಗೆ ಅಕ್ರಮ ಸಂಬಂಧವಿರುವುದು ಗೌರವ್‌ಗೆ ತಿಳಿದುಬಂದಿತ್ತು. ಇದರಿಂದ ದಂಪತಿ ನಡುವೆ ತೀವ್ರ ಗಲಾಟೆ ನಡೆದು, ದೀಪಾಲಿ ಪತಿಯನ್ನು ತೊರೆದು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಳು.
ಆಗಸ್ಟ್ 20ರಂದು ಜಗಳ ಬಗೆಹರಿಸಿಕೊಳ್ಳಲು ಗೌರವ್ ನಾಗ್ಪುರದ ನರೇಂದ್ರ ನಗರಕ್ಕೆ ತೆರಳಿದ್ದಾಗ, ದೀಪಾಲಿ, ಆಕೆಯ ಪ್ರಿಯಕರ ಋಷಿಕೇಶ್ ಖೋಡೆ ಹಾಗೂ ಆತನ ಸಹಚರರು ಗೌರವ್ ಜೊತೆ ಗಲಾಟೆ ತೆಗೆದಿದ್ದಾರೆ. ದೀಪಾಲಿ ಪ್ರಚೋದನೆಯ ಮೇರೆಗೆ ಚಾಕುವಿನಿಂದ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಗೌರವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ದೀಪಾಲಿಯನ್ನು ಠಾಣೆಯ ಕ್ರೈಂ ಬ್ರಾಂಚ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದು, ವಿಚಾರಣೆ ವೇಳೆ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನಾಗ್ಪುರದ ಬೆಲ್ತರೋಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.





Leave a comment