Home ದಾವಣಗೆರೆ ಮೈಸೂರು ದಸರಾ ಉದ್ಘಾಟನೆಗೆ ‘ಜಲಋಷಿ’ ಆಯ್ಕೆ: ಗವಿಶ್ರೀಗಳ ಸಮಾಜಮುಖಿ ಕಾಯಕಕ್ಕೆ ರಾಜ್ಯಾದ್ಯಂತ ಶ್ಲಾಘನೆ, ಎಲ್ಲೆಲ್ಲೂ ಟ್ರೆಂಡಿಂಗ್!
ದಾವಣಗೆರೆಬೆಂಗಳೂರು

ಮೈಸೂರು ದಸರಾ ಉದ್ಘಾಟನೆಗೆ ‘ಜಲಋಷಿ’ ಆಯ್ಕೆ: ಗವಿಶ್ರೀಗಳ ಸಮಾಜಮುಖಿ ಕಾಯಕಕ್ಕೆ ರಾಜ್ಯಾದ್ಯಂತ ಶ್ಲಾಘನೆ, ಎಲ್ಲೆಲ್ಲೂ ಟ್ರೆಂಡಿಂಗ್!

Share
ದಸರಾ
Share

ಬೆಂಗಳೂರು/ಮೈಸೂರು: ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಉದ್ಘಾಟಿಸುವ ಶ್ರೇಷ್ಠ ಗೌರವ ಕೊಪ್ಪಳ ಗವಿಮಠದ ಸಮಾಜಮುಖಿ ಚಿಂತಕ, ‘ಜಲಋಷಿ’ ಎಂದೇ ಪ್ರಸಿದ್ಧರಾಗಿರುವ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರಿಗೆ ಒಲಿದಿದೆ. ಈ ಕುರಿತು ವಿಧಾನಸೌಧದ ಉಭಯ ಸದನಗಳಲ್ಲಿ ಸರ್ಕಾರ ಅಧಿಕೃತ ಘೋಷಣೆ ಮಾಡಿದ್ದು, ರಾಜ್ಯಾದ್ಯಂತ ಭಾರಿ ಸಂತಸ ಹಾಗೂ ಪ್ರಶಂಸೆ ವ್ಯಕ್ತವಾಗಿದೆ.

ಅಕ್ಟೋಬರ್ 11ರಂದು ಚಾಮುಂಡಿ ಬೆಟ್ಟದಲ್ಲಿ ಶೋಭಾಯಾತ್ರೆಗೆ ಚಾಲನೆ:

ಬರುವ ಅಕ್ಟೋಬರ್ 11ರಂದು ಶುಭ ಮುಹೂರ್ತದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ 11 ದಿನಗಳ ಈ ಸಾಂಸ್ಕೃತಿಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಅಕ್ಟೋಬರ್ 20ರಂದು ಆಯುಧ ಪೂಜೆ ಹಾಗೂ ಅಕ್ಟೋಬರ್ 21ರಂದು ವಿಜಯದಶಮಿಯ ವೈಭವೋಪೇತ ‘ಜಂಬೂಸವಾರಿ’ ಮೆರವಣಿಗೆಯೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ.

ಕಾಯಕಯೋಗಿಗೆ ಒಲಿದ ಗೌರವ:

ಕೊಪ್ಪಳದ ಗವಿಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಅನ್ನದಾಸೋಹ, ಜ್ಞಾನದಾಸೋಹ ಹಾಗೂ ಉಚಿತ ಆರೋಗ್ಯ ಸೇವೆಯ ಮೂಲಕ ಲಕ್ಷಾಂತರ ಜನರ ಬದುಕಿಗೆ ಆಸರೆಯಾಗಿದೆ. ‘ಜಲ ದೀಕ್ಷೆ’ ಅಭಿಯಾನದ ಮೂಲಕ ಹತ್ತಾರು ಕೆರೆಗಳ ಹೂಳೆತ್ತಿ ಪರಿಸರ ಜಾಗೃತಿ ಮೂಡಿಸಿದ ಶ್ರೀಗಳನ್ನು ಭಕ್ತರು ಪ್ರೀತಿಯಿಂದ ‘ಜಲಋಷಿ’ ಎಂದು ಕರೆಯುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಇಂತಹ ನಿಸ್ವಾರ್ಥ ಸಂತರ ಆಯ್ಕೆಯು ದಸರಾ ವೇದಿಕೆಯ ನೈಜ ಸಾಂಸ್ಕೃತಿಕ ಮತ್ತು ಮಾನವೀಯ ಮೌಲ್ಯವನ್ನು ಹೆಚ್ಚಿಸಿದೆ ಎಂದು ನಾಡಿನ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್:

ಸರ್ಕಾರದ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಫೇಸ್‌ಬುಕ್, ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್‌ಗಳಲ್ಲಿ #MysuruDasara2026 ಮತ್ತು #GavisiddheshwaraSwamiji ಹ್ಯಾಶ್‌ಟ್ಯಾಗ್‌ಗಳು ಭಾರಿ ಟ್ರೆಂಡಿಂಗ್‌ನಲ್ಲಿವೆ. “ಅರ್ಹ ವ್ಯಕ್ತಿಗೆ ಸಿಕ್ಕ ಸೂಕ್ತ ಗೌರವ”, “ನಾಡಹಬ್ಬದ ಮೌಲ್ಯ ಹೆಚ್ಚಿಸಿದ ಆಯ್ಕೆ” ಎಂಬ ಕಮೆಂಟ್‌ಗಳು ಸಾಮಾಜಿಕ ತಾಣಗಳಲ್ಲಿ ರಾರಾಜಿಸುತ್ತಿವೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles