ಮೈಸೂರು: DK, BK, PK ನಿಮ್ ಆಟ ನಿಲ್ಲಿಸಿ, ಚಾಕು ಚೂರಿ ಕಳುಹಿಸಿ ಬೆದರಿಸಿದರೆ ನಿಮ್ಮ ಮನೆಯ ಹತ್ತಿರ ನಾವೂ ಬರುತ್ತೇವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.
ಚಾಕು ಚೂರಿ ಕಳುಹಿಸಿ ಬೆದರಿಸುವ ತಂತ್ರ ಬಿಡಿ. ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಟೋಟೋಪ ನಿಲ್ಲಿಸಿ. 2027 ಕಳೆದ ಕೂಡಲೇ ಬಂಗಲೇ ಖಾಲಿ ಮಾಡಿ ಸದಾಶಿವ ನಗರದಲ್ಲಿ ಮನೆಯಲ್ಲಿ ಇರಬೇಕು. ಛಲವಾದಿ ನಾರಾಯಣ ಸ್ವಾಮಿ ಅವರು ಹೇಳಿದ್ದು ಕಾಂಗ್ರೆಸ್ ಅನ್ನು ಜನರು ಛಿದ್ರ ಮಾಡ್ತಾರೆ ಎಂದಿದ್ದಾರೆ. ಆದರೆ ಅಪಾರ್ಥ ಕಲ್ಪಿಸಿ ಬೆದರಿಸುವ ತಂತ್ರ ಕೈಬಿಡಿ. ಇಲ್ಲದಿದ್ದರೆ ನಾವೂ ಸುಮ್ಮನಿರಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಅವರ ಮನೆಗೆ ಕಾಂಗ್ರೆಸ್ ಪಕ್ಷದ ಎನ್ಎಸ್ಯುಐ ಘಟಕದಿಂದ ‘ಬ್ಲಿಂಕಿಟ್’ ಆನ್ಲೈನ್ ಪಾರ್ಸೆಲ್ ಮೂಲಕ ಚಾಕು ಹಾಗೂ ಮಾರಕಾಸ್ತ್ರಗಳನ್ನು ಕಳುಹಿಸಿ ಕೊಲೆ ಬೆದರಿಕೆ ಹಾಕಿರುವ ಹೇಯ ಕೃತ್ಯವನ್ನು ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಯಾವ ಗೊಡ್ಡು ಬೆದರಿಕೆ ಬೆದರಲ್ಲ. ಚಾಕು ಚೂರಿ ಕಳುಹಿಸಿ ಬೆದರಿಸಿದರೆ, ಹೆದರಿಸಿದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಪ್ರತಿಭಟನೆ:
ಮೈಸೂರಿನ ಟೌನ್ ಹಾಲ್ ಬಳಿ ಇರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ಜಮಾಯಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಗೂಂಡಾ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಗಣ್ಯರ ಭಾಗಿ: ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಸುಬ್ಬಣ್ಣ ಹಾಗೂ ಮಾಜಿ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮಾರಕಾಸ್ತ್ರಗಳ ಕಳಹಿಸಿ ಬೆದರಿಕೆ: ವಿಪಕ್ಷ ನಾಯಕರ ಮನೆಗೆ ಆನ್ಲೈನ್ ಮೂಲಕ ಚಾಕು ಕಳುಹಿಸಿ ಭಯೋತ್ಪಾದನೆ ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ನಾಯಕರು ತರಾಟೆಗೆ ತೆಗೆದುಕೊಂಡರು.
ಮುಖಂಡರ ಉಪಸ್ಥಿತಿ: ಪ್ರತಿಭಟನೆಯಲ್ಲಿ ಮಾಜಿ ಮೇಯರ್ಗಳಾದ ಶಿವಕುಮಾರ್, ಪ್ರಮುಖರಾದ ಸಂದೇಶ್ ಸ್ವಾಮಿ, ಮಂಜುನಾಥ್, ಹೇಮಾ ನಂದೀಶ್ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪ್ರಮುಖ ವಿರೋಧ ಪಕ್ಷದ ನಾಯಕರಿಗೇ ರಕ್ಷಣೆ ಇಲ್ಲದಂತಾಗಿದ್ದು, ಸಮಾಜಘಾತುಕ ಶಕ್ತಿಗಳು ರಾಜಾರೋಷವಾಗಿ ಮೆರೆಯುತ್ತಿವೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದರು.





Leave a comment