SUDDIKSHANA KANNADA NEWS/ DAVANAGERE/ DATE-30-06-2025
ಕೆ. ಆರ್. ಎಸ್: ಕೃಷ್ಣರಾಜಸಾಗರದ ಒಟ್ಟು 124 ಅಡಿ ಸಾಮರ್ಥ್ಯದಲ್ಲಿ 120.90 ಅಡಿ ಭರ್ತಿ ಆಗಿದೆ. ಅಣೆಕಟ್ಟೆಗೆ 49 TMC ನೀರಿನ ಸಾಮರ್ಥ್ಯವಿದೆ. 193 ವರ್ಷಗಳಲ್ಲಿ 76 ಬಾರಿ ಭರ್ತಿಯಾಗಿದೆ. 2023-24 ರಲ್ಲಿ ಬರಗಾಲವಿತ್ತು. ಈ ಕಾರಣಕ್ಕೇ “ಸಿದ್ದರಾಮಯ್ಯ ಅವರ ಕಾಲುಗುಣ ಚನ್ನಾಗಿಲ್ಲ, ಕಾಂಗ್ರೆಸ್ ಸರ್ಕಾರದ ಕಾಲುಗುಣ ಸರಿಯಿಲ್ಲ” ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಈಗ ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿ ಆಗುತ್ತಿದೆ. ವಿರೋಧ ಪಕ್ಷಗಳು ಮೂಡಾತ್ಮರು ಈಗ ಏನು ಹೇಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅಣಕಿಸಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಈ ಬಾರಿ ಕಾವೇರಿ ಅಭಿವೃದ್ಧಿ ನಿಗಮಕ್ಕೆ 3000 ಕೋಟಿ ಹಣ ಕೊಟ್ಟಿದ್ದೇವೆ. ಈಗ ಟೀಕಿಸುತ್ತಿರುವವರು ಅಧಿಕಾರದಲ್ಲಿದ್ದಾಗ ಕಾವೇರಿ ನಿಗಮಕ್ಕೆ ಹಣ ಕೊಡಲಿಲ್ಲ ಎಂದು ಟೀಕಿಸಿದರು.
ನಾವು ಅಧಿಕಾರದಲ್ಲಿದ್ದಾಗ ಯಾವಾಗಲಾದರೂ ರೈತರಿಗೆ ಬೀಜ, ಗೊಬ್ಬರಕ್ಕೆ ತೊಂದರೆ ಮಾಡಿದ್ದೇವಾ? ಬೀಜ ಕೇಳಿದವರಿಗೆ ಗೋಲಿಬಾರ್ ಮಾಡಿದ್ದೇವಾ ಎಂದು ಪ್ರಶ್ನಿಸಿದರು. ಕಾವೇರಿ ತಾಯಿ, ಚಾಮುಂಡೇಶ್ವರಿ ಕೃಪಾಕಟಾಕ್ಷದಿಂದ ರಾಜ್ಯ ಸುಭಿಕ್ಷವಾಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಎಲ್ಲಾ ನಾಲೆಗಳಿಗೂ ತಕ್ಷಣದಿಂದ ನೀರು ಹರಿಸಲು ವೇದಿಕೆಯಿಂದಲೇ ಆದೇಶ ನೀಡಿದರು.