SUDDIKSHANA KANNADA NEWS\ DATE:28-10-2023
ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ಬ್ಯೂಟಿಷಿಯನ್ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್. ಪೊಲೀಸರ ತನಿಖೆಯಲ್ಲಿ ಶಾಕಿಂಗ್ ವಿಚಾರ ಬಯಲಾಗಿದೆ.
ಶಾಹಿನಾ ಬಾನು (35) ಅವರನ್ನು ಭೀಕರವಾಗಿ ಕೊಲೆ ಮಾಡಿದ್ದು ಎರಡನೇ ಪತಿಯಲ್ಲ. ಮೊದಲ ಗಂಡ. ಅಂದ ಹಾಗೆ ಆತನ ಹೆಸರು
ಸೈಯದ್ ಜಿಲಾನಿ. ಈತನೇ ಭೀಕರವಾಗಿ ಕೊಲೆ ಮಾಡಿದ್ದ ಕಿರಾತಕ. ಈ ಪ್ರಕರಣ ಬೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿ ಅಮಾಯಕನಂತೆ ನಟಿಸಿದ್ದು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಪೊಲೀಸರ ಚಾಕಚಕ್ಯತೆಯಿಂದ ಹಂತಕನನ್ನು ಬಂಧಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಬ್ಯೂಟಿಷಿಯನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಕೊಲೆ ಮಾಡಿದ್ದು ಎರಡನೇ ಪತಿಯಲ್ಲ ಮೊದಲನೇ ಪತಿ ಎಂದರು ತಿಳಿಸಿದರು.
ತಾನೇ ಕೊಲೆ ಮಾಡಿ ಎರಡನೇ ಪತಿಯ ಮೇಲೆ ಹಾಕಿ ಅಮಾಯಕನಂತೆ ನಾಟವಾಡಿದ ಆರೋಪಿಯನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ 21 ರಂದು ಬಸ್ ನಿಲ್ದಾಣ ಬಳಿಯ ಶಾಂತಿ ನಗರದ ಮನೆಯೊಂದರಲ್ಲಿ ಮಹಿಳಾ ಬ್ಯೂಟಿಷಿಯನ್ ಶಾಹಿನಾ ಬಾನು (35) ಕುತ್ತಿಗೆಗೆ ವೆಲ್ ದಿಂದ ಬಿಗಿದು ಮಾರಕಾಸ್ತ್ರಗಳಿಂದ ಹಲ್ಲೆಗೈದು ಭೀಕರವಾಗಿ ಕೊಲೆ ಮಾಡಲಾಗಿತ್ತು.ಆಕೆಯ ಎರಡನೇ ಪತಿಯ ಮೇಲೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಆದ್ರೆ ಅಮಾಯಕನಂತೆ ಕೊಲೆ ನಡೆದ ಸ್ಥಳದಲ್ಲಿಯೇ ಇದ್ದ ಮೊದಲನೇ ಪತಿಯೇ ಕೊಲೆಯ ಆರೋಪಿ ಅನ್ನೋದು ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಕೊಲೆಯಾದ ಶಾಹಿನಾ ಬಾನು ಮೊದಲನೇ ಪತಿ.
ಆರೋಪಿ ಸೈಯದ್ ಜಿಲಾನಿ ಜೊತೆ ಶಾಹಿನಾ ಬಾನು ಮದುವೆ ಆಗಿ ಗಂಡು ಮಗ ಇದ್ದ. ಇಬ್ಬರ ನಡುವೆ ಕೌಟುಂಬಿಕ ಹೊಂದಾಣಿಕೆ ಇಲ್ಲದ ಕಾರಣ ಡಿವೋರ್ಸ್ ಪಡೆದಿದ್ದರು. ಶಾಹಿನಾ ಬಾನು ಜೊತೆಗೆ ಡಿವೋರ್ಸ್ ಪಡೆದ ಸೈಯದ್ ಜಿಲಾನಿ ಆಕೆಯ ಸಹೋಧರಿಯನ್ನು ಮದುವೆ ಮಾಡಿಕೊಂಡು ಸಾಂಸಾರೀಕ ಜೀವನ ನಡೆಸುತ್ತಿದ್ದ.
ಇತ್ತ ಶಾಹಿನಾ ಬಾನು ಕಲಬುರಗಿಯ ಮಹಿಬೂಬ್ ನಗರದ ಶೇಕ್ ಹೈದರ್ ಎಂಬಾತನೊಂದಿಗೆ ಎರಡನೇ ಮದುವೆಯಾಗಿ ಐದಾರು ವರ್ಷ ಸಂಸಾರ ನಡೆಸಿದ್ದಾರೆ. ಒಂದು ಹೆಣ್ಣು ಮಗು ಕೂಡಾ ಇದೆ. ಆದ್ರೆ ಪತ್ನಿ ಮೇಲೆ ಸಂಸಯ ಪಟ್ಟು ಇತ್ತೀಚಿಗಷ್ಟೆ ಶೇಕ್ ಹೈದರ್ ಕೂಡಾ ಆಕೆಯನ್ನು ಬಿಟ್ಟಿದ್ದ. ಬಿಟ್ಟು ಹೋಗುವಾಗ ಶೇಖ ಹೈದರ್ ತನ್ನೊಂದಿಗೆ ಮಗಳನ್ನು ಕರೆದೊಯ್ದಿದ್ದ ಆದ್ರೆ ನ್ಯಾಯಾಲಯ ಮುಖಾಂತರ ಶಾಹಿನಾ ಬಾನು ತನ್ನ ಮಗಳನ್ನು ಸುಪರ್ದಿಗೆ ಪಡೆದು ತನ್ನ ತಾಯಿಯ ಬಳಿ ಬಿಟ್ಟಿದ್ದಳು.
ತಾನು ಮಾತ್ರ ಒಬ್ಬಂಟಿಯಾಗಿ ಶಾಂತಿ ನಗರದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದಳು. ಮಗಳನ್ನು ಕಸಿದುಕೊಂಡ ಕೋಪದಲ್ಲಿ ಎರಡನೇ ಪತಿಯೇ ಕೊಲೆಗೈದಿದ್ದಾನೆ ಎಂದು ಮೃತಳ ತಾಯಿ ದೂರಿನದಲ್ಲಿ ಸಂಶಯ ವ್ಯಕ್ತಪಡಿಸಿದ್ರು.
ಆದ್ರೆ ಪೊಲೀಸರು ತನಿಖೆ ವೇಳೆ ಎರಡನೇ ಪತಿ ಅಲ್ಲ ಮೊದಲನೆ ಪತಿಯೇ ಆರೋಪಿ ಅನ್ನೊ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ. ಡಿವೋರ್ಸ್ ಆದ್ರೂ ಮೊದಲನೇ ಪತಿ ಹಾಗೂ ಶಾಹಿನಾ ಬಾನು ನಡುವೆ ಆಗಾಗ ಜಗಳ ನಡೆಯುತ್ತಿದ್ದರಿಂದ ಹಾಗೂ ಕೌಟುಂಬಿಕ ಕಲಹಗಳು ಹೆಚ್ಚಾಗಿದ್ದರಿಂದ ರೊಚ್ಚಿಗೆದ್ದ ಸೈಯದ್ ಜಿಲಾನಿ ಸಮಯ ಸಾಧಿಸಿ ಮಾರಣಾಂತಿಕ ಹಲ್ಲೆಗೈದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ ನಂತರ ಎಲ್ಲಾ ಕುಟುಂಬಸ್ಥರೊಂದಿಗೆ ಬಂದು ಏನು ಅರಿಯದವನಂತೆ ನಾಟಕವಾಡಿ ತಾನು ಮಾಡಿದ ಕೊಲೆ ಆರೋಪ ಎರಡನೇ ಪತಿಯ ತೆಲೆ ಕಟ್ಟುವಲ್ಲಿ ಯಶಸ್ವಿಯಾಗಿದ್ದ.
ಆರೋಪಿ ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ನಿಜವಾದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶೋಕ ನಗರ ಪೊಲೀಸರ ಕಾರ್ಯಕ್ಕೆ ಆರ್. ಚೇತನ್ ಪ್ರಶಂಸೆ ವ್ಯಕ್ತಪಡಿಸಿದರು.