SUDDIKSHANA KANNADA NEWS/ DAVANAGERE/ DATE:17-08-2024
ದಾವಣಗೆರೆ: ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ, ಆಸ್ತಿ. ಕೇವಲ ಚುನಾವಣೆ ವೇಳೆ ಮಾತ್ರ ಕಾರ್ಯಕರ್ತರನ್ನು ಬಳಸಿಕೊಂಡು ಆನಂತರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುವಂತಾಗಬೇಕು ಎಂದು ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜನ್ ಅವರು ಸೂಚನೆ ನೀಡಿದರು.
ಜಗಳೂರು ಪಟ್ಟಣದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ ಕಾರಣಕ್ಕೆ ಇಂದು ನಾವು ಅಧಿಕಾರದಲ್ಲಿದ್ದೇವೆ. ಅವರ ಪರಿಶ್ರಮ, ನಿಷ್ಠೆ ಎಂದಿಗೂ ಮರೆಯಲಾಗದು. ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಆ ಬಳಿಕ ಮರೆತುಬಿಡಬಾರದು. ಅಧಿಕಾರ ಹಂಚಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದು ಹೇಳಿದರು.
ರಾಜಕಾರಣದಲ್ಲಿ ಯುವಕರು ಬೆಳೆಯಬೇಕು. ಕೇವಲ ಹಿರಿಯರಿಗೆ ಮಾತ್ರ ಅಧಿಕಾರ ಕೊಟ್ಟು ಸುಮ್ಮನಾಗಬಾರದು. ಹಿರಿಯರನ್ನೂ ಜೊತೆಗಿಟ್ಟುಕೊಂಡು ಯುವಕರಿಗೂ ಅಧಿಕಾರ ಹಂಚಿಕೆ ಮಾಡಿದರೆ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ. ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಕಾಂಗ್ರೆಸ್ ಗೆಲ್ಲಲು ಅವರೇ ಪ್ರಮುಖ ಕಾರಣ. ಮುಖಂಡರು ಕೇವಲ ತಾವು ಮಾತ್ರ ಅಧಿಕಾರ ಇಟ್ಟುಕೊಂಡು ಕಾರ್ಯಕರ್ತರು ಕೇವಲ ದುಡಿಯುತ್ತಲೇ ಇರುವಂತಾಗುವ ವ್ಯವಸ್ಥೆ ಬದಲಾಗಬೇಕಿದೆ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ದುಡಿದವರ ಬಯೋಡೇಟಾ ಸಂಗ್ರಹಿಸಿ. ಅವರ ಸೇವೆಯನ್ನು ಪರಿಗಣಿಸಿ ನಿಗಮ ಮಂಡಳಿಗಳಲ್ಲಿ ನೇಮಿಸುವಂತೆ ಸೂಚನೆ ನೀಡಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಯಾವುದೇ ಚುನಾವಣೆ ಬರಲಿ ಮೊದಲು ಕಾರ್ಯಕರ್ತರನ್ನು ಹುರಿದುಂಬಿಸಲಾಗುತ್ತದೆ. ಅವರು ಕ್ರಿಯಾಶೀಲರಾಗಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶ ಸಾಧ್ಯ. ಹಾಗಾಗಿ, ಅಧಿಕಾರ ಹಂಚಿಕೆ ವಿಚಾರ ಬಂದಾಗ ಅವರನ್ನು ದೂರವಿಡುವುದು ಸರಿಯಲ್ಲ ಎಂದು ಹೇಳಿದರು.
ಒಮ್ಮೆಲೆ ಎಲ್ಲರಿಗೂ ಅಧಿಕಾರ ನೀಡಲು ಆಗದು. ಯಾಕೆಂದರೆ ಲಕ್ಷಾಂತರ ಕಾರ್ಯಕರ್ತರೆಲ್ಲರಿಗೂ ಅಧಿಕಾರ ಸಿಗದು. ಹಾಗಾಗಿ, ಸರತಿ ಆಧಾರದ ಮೇಲೆ ಪಕ್ಷಕ್ಕೆ ಸಲ್ಲಿಸಿರುವ ಗಣನೀಯ ಸೇವೆ ಪರಿಗಣಿಸಿ ಹಂತ ಹಂತವಾಗಿ ಅಧಿಕಾರ
ನೀಡುವ ಮೂಲಕ ಹುರಿದುಂಬಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಆದ್ಯತೆ ಸಿಗಬೇಕು. ಅದರಂತೆ ಅವರ ಶಕ್ತಿ, ಯುಕ್ತಿಯನ್ನು ಬಳಸಿಕೊಳ್ಳಬೇಕಿದೆ. ಮುಖಂಡರು ತಾವು ಮಾತ್ರ ಪ್ರಚಾರಕ್ಕೆ ಬಂದು, ಕಾರ್ಯಕರ್ತರು, ಯುವಕರನ್ನು ಮರೆಮಾಚುವ ಕೆಲಸ ಮಾಡಬೇಡಿ.
ಅವರನ್ನೂ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಅದ್ಧೂರಿ ಸ್ವಾಗತ:
ಜಗಳೂರಿಗೆ ಲೋಕಸಭೆ ಚುನಾವಣೆಗೆ ಮುನ್ನ ಆಗಮಿಸಿದ್ದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಅದರಂತೆ ಗೆದ್ದ ಬಳಿಕ ಬಂದ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅದೇ ರೀತಿಯಲ್ಲಿ ಜನರು ಪ್ರೀತಿ, ವಿಶ್ವಾಸ ತೋರಿದರು. ಅದ್ಧೂರಿಯಾಗಿ ಸ್ವಾಗತ ಕೋರಿದರು. ಶಾಸಕ ದೇವೇಂದ್ರಪ್ಪ ನಿವಾಸದಲ್ಲಿ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಮುತ್ತೈದೆಯರಿಗೆ ಹುಡಿ ನೀಡಿದರು. ಇದಕ್ಕೆ ಮಹಿಳೆಯರು ಖುಷಿ ವ್ಯಕ್ತಪಡಿಸಿದರು.
ಅದೇ ಸರಳತೆ:
ಇನ್ನು ಚುನಾವಣೆಗೆ ಮುನ್ನ ಬಂದಿದ್ದ ಅವರಾಡಿದ ಮಾತುಗಳು, ನಡೆದುಕೊಂಡು ರೀತಿಯಲ್ಲಿ ಸ್ವಲ್ಪವೂ ಬದಲಾಗಿಲ್ಲ. ಅದೇ ವಿನಯತೆ, ಸರಳತೆ ಕಂಡು ಬರುತ್ತಿದೆ. ಪ್ರಭಾ ಮಲ್ಲಿಕಾರ್ಜುನ್ ಅವರ ಈ ಕಾರ್ಯವೈಖರಿಯು ಮಹಿಳೆಯರು, ಕಾರ್ಯಕರ್ತರು, ಮುಖಂಡರ ಮೆಚ್ಚುಗೆಗೆ ಪಾತ್ರವಾಯಿತು.
ಜಗಳೂರು ಕಾಂಗ್ರೆಸ್ ಕಚೇರಿಗೆ ಸಂಸದರು ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ದೇವೇಂದ್ರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.