SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ: ನಗರದ ಎಂಸಿಸಿ ಬಿ ಬ್ಲಾಕ್ ನ ವಾಟರ್ ಟ್ಯಾಂಕ್ ನಿಂದ ಲಕ್ಷ್ಮಿ ಫ್ಲೋರ್ ಮಿಲ್ಲ್ ರಸ್ತೆಯ ಎಡ ಭಾಗಕ್ಕೆ ಹೊಂದಿಕೊಂಡಿರುವ ಉದ್ಯಾನವನದಲ್ಲಿ ವಾಯು ವಿಹಾರ ಮಾಡುವವರ ಅನುಕೂಲಕ್ಕಾಗಿ ಅಳವಡಿಸಲಾದ
ಅಲಂಕೃತ ದೀಪದ ಉದ್ಘಾಟನೆಯನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ನೆರವೇರಿಸಿದರು.
ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾತು ಕೊಟ್ಟಂತೆ ದಾವಣಗೆರೆಯನ್ನು ಸುಂದರ ಸ್ಥಳವನ್ನಾಗಿ ಮಾಡುವ ಪ್ರಯತ್ನದ ಹೆಜ್ಜೆಯ ಗುರುತು ಇದಾಗಿದ್ದು, ಈ ಉದ್ಯಾನವನದಲ್ಲಿ ನಸುಕಿನ ವೇಳೆ ಮತ್ತು ಸಂಜೆಯ ವೇಳೆ ವಾಯು ವಿಹಾರಕ್ಕೆ ಬರುವ ಮಹಿಳೆಯರು, ಹಿರಿಯರು ಸೇರಿದಂತೆ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ವಾಯು ವಿಹಾರಕ್ಕೆ ಬಂದಂತಹ ಸಾರ್ವಜನಿಕರೊಂದಿಗೆ ಮಾತನಾಡುತ್ತಾ ಅವರಿಂದಲೂ ಅಭಿಪ್ರಾಯವನ್ನು ಪ್ರಭಾ ಮಲ್ಲಿಕಾರ್ಜುನ್ ಅವರು ಪಡೆದರು.
ಈ ವೇಳೆ ಮಾತನಾಡಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ಚಿಂತನೆಗಳು
ಒಂದೊಂದಾಗಿಯೇ ಸಾಕಾರಗೊಳ್ಳುತ್ತಿವೆ. 38ನೇ ವಾರ್ಡ್ ನ ಕಾರ್ಪೊರೇಟರ್ ಗಡಿಗುಡಾಳ್ ಮಂಜುನಾಥ್ ಅವರು ಬಡಾವಣೆಯ ಅಭಿವೃದ್ಧಿ ಕೆಲಸದ ಮತ್ತೊಂದು ಹೊಸ ಪ್ರಯತ್ನ ಇದಾಗಿದೆ. ಜನರ ಅನುಕೂಲಕ್ಕಾಗಿ ಅಲಂಕೃತ ದೀಪ ಅಳವಡಿಸಲಾಗಿದ್ದು, ಜನರಿಗೆ ತುಂಬಾನೇ ಅನುಕೂಲಕರ ಎಂದು ತಿಳಿಸಿದರು.
ಕಾಮಗಾರಿ ವೀಕ್ಷಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು, ಗುಣಮಟ್ಟ, ಮುಂದಿನ ನಿರ್ವಹಣೆ ಹೇಗೆ ನಿರ್ವಹಿಸಲಾಗುವುದು, ಸಾರ್ವಜನಿಕರು ಹೇಗೆ ಇದರ ಸದುಪಯೋಗ ಪಡೆದುಕೊಳ್ಳುತ್ತಾರೆ ಎಂಬ ಕುರಿತಂತೆ ಮಾಹಿತಿ ಪಡೆದುಕೊಂಡರು.
ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯಾವ ರೀತಿಯ ಕಾಮಗಾರಿಗಳನ್ನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಪಡೆದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
ದಾವಣಗೆರೆಯ ಸರ್ವತೋಮುಖ ಅಭಿವೃದ್ಧಿಗೆ ಇನ್ನೂ ಅನೇಕ ಉತ್ತಮವಾದ ಕೆಲಸಗಳು ನಡೆಯಲಿದೆ. ನಗರದಲ್ಲಿ ಸುಂದರ ಹಾಗೂ ಸುರಕ್ಷಿತ ಉದ್ಯಾನವನಗಳಿಂದ ವಾಯುವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ಆರೋಗ್ಯದ ದೃಷ್ಟಿಯಿಂದಲೂ ಬಹಳ ಅನುಕೂಲಕರವಾಗಲಿದೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದಿಂದ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು, ಈ ಪಾರ್ಕ್ ನಲ್ಲಿ ಸಂಜೆ ಮತ್ತು ರಾತ್ರಿಯ ಹೊತ್ತಿನಲ್ಲಿ ಜನರು ವಾಯುವಿಹಾರ ಮಾಡುತ್ತಾರೆ. ಇಲ್ಲಿ ದೀಪದ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗಮನಕ್ಕೆ ತರಲಾಯಿತು. ಜನರ ಹಿತದೃಷ್ಟಿಯಿಂದ ಕೂಡಲೇ ದೀಪಾಲಂಕಾರದ ವ್ಯವಸ್ಥೆ ಮಾಡಲು ಸೂಚಿಸಿದರಲ್ಲದೇ, ಅನುದಾನ ಬಿಡುಗಡೆ ಮಾಡಿದರು. ಆದ್ದರಿಂದ ಈ ಕೆಲಸ ಸಾಧ್ಯವಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಮೇಯರ್ ವಿನಾಯಕ್ ಪೈಲ್ವಾನ್, ದಾಕ್ಷಾಯಣಮ್ಣ, ಭರತ್ ಮೈಲಾರಿ ಸೇರಿದಂತೆ ವಾರ್ಡ್ ನ ಪ್ರಮುಖರು, ಕಾಂಗ್ರೆಸ್ ಮುಖಂಡರು ಹಾಜರಿದ್ದರು.