ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಹಿತ್ತಾಳೆ ಉದ್ಯಮಿಯೊಬ್ಬರ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಸ್ವಂತ ಮನೆಯಲ್ಲೇ ತಂದೆ ಇಟ್ಟಿದ್ದ 1.2 ಕೋಟಿ ರೂಪಾಯಿ ದರೋಡೆ ಮಾಡಿದ್ದಾಳೆ.
ಘಟನೆಯ ವಿವರ:
ಮೇ 11 ರಂದು ಮೊರಾದಾಬಾದ್‌ನ ನಾಗಫಣಿ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಬರ್ ಕಾಂಪೌಂಡ್‌ನಲ್ಲಿರುವ ಉದ್ಯಮಿ ಮೊಹಮ್ಮದ್ ಇಮ್ರಾನ್ ಅವರ ಮನೆಗೆ ನುಗ್ಗಿದ ಸಶಸ್ತ್ರ ದರೋಡೆಕೋರರು, ಕುಟುಂಬಸ್ಥರನ್ನು ಗನ್ ಪಾಯಿಂಟ್‌ನಲ್ಲಿ ಒತ್ತೆಯಾಳಾಗಿ ಇರಿಸಿದ್ದರು. ಮನೆಯಲ್ಲಿದ್ದ ಸುಮಾರು 1.2 ಕೋಟಿ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಲ್ಲದೆ, ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ಡಿವಿಆರ್ (DVR) ಕೂಡ ಹೊತ್ತೊಯ್ದಿದ್ದರು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ:
ತನಿಖೆ ನಡೆಸಿದ ಪೊಲೀಸರಿಗೆ ಉದ್ಯಮಿಯ ಮಗಳು ಅರಿಬಾಳ ಮೇಲೆ ಅನುಮಾನ ಬಂದಿದೆ. ವಿಚಾರಣೆ ನಡೆಸಿದಾಗ ಅರಿಬಾ ಮತ್ತು ಆಕೆಯ ಪ್ರಿಯಕರ ಅರ್ಷದ್ ವಾರ್ಸಿ ಈ ದರೋಡೆಯ ಮಾಸ್ಟರ್ ಮೈಂಡ್ ಎಂಬುದು ತಿಳಿದುಬಂದಿದೆ. ಅಂತರಜಾತಿ ಪ್ರೇಮಕ್ಕೆ ಮನೆಯವರ ವಿರೋಧವಿದ್ದ ಕಾರಣ, ಈ ಹಣದೊಂದಿಗೆ ಓಡಿಹೋಗಿ ಹೊಸ ಜೀವನ ಆರಂಭಿಸಲು ಇಬ್ಬರೂ ಈ ಸಂಚು ರೂಪಿಸಿದ್ದರು.
ಕಾರ್ಯಾಚರಣೆ:
ಪೊಲೀಸರು ಅರಿಬಾ, ಅರ್ಷದ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 47.24 ಲಕ್ಷ ರೂಪಾಯಿ ನಗದು, ನಾಲ್ಕು ಪಿಸ್ತೂಲುಗಳು, ಐದು ಮೊಬೈಲ್ ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಹಣದ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.





Leave a comment