SUDDIKSHANA KANNADA NEWS/ KALABURAGI/ DATE:22-09-2023
ಕಲಬುರಗಿ (Kalaburagi): ರಾಜ್ಯದಲ್ಲಿ ಬರಗಾಲ ತೀವ್ರವಾಗುತ್ತಿದೆ. ಒಂದೆಡೆ ಮಳೆ ಇಲ್ಲ, ಮತ್ತೊಂದೆಡೆ ಜನರ ಸಂಕಷ್ಟವೂ ಹೇಳತೀರದ್ದಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳನ್ನು ಹೆಚ್ಚಿಸಲು ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
ಪೊಲೀಸ್ (Police) ಕಸ್ಟಡಿಯಿಂದ ಎಸ್ಕೇಪ್ ಆಗಲು ಹೋದ… ಹೊಟ್ಟೆ ಬಿರಿಯುವಂತೆ ತಿಂದು ಮಹಡಿಯಿಂದ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ….!
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರು ನೆರವು ನೀಡುವಂತೆ ಕೋರಿದ್ದಾರೆ.
ನವದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿ ಆಗಲು ಸಮಯ ಕೇಳಿದ್ದೆ. ಆದ್ರೆ, ಅವರು ಸಮಯಾವಕಾಶ ಕೊಡಲಿಲ್ಲ. ಈ ಕಾರಣದಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ಬರ ಪರಿಸ್ಥಿತಿ ದಿನ ಕಳೆದಂತೆ ತೀವ್ರವಾಗುತ್ತಿದೆ. 31 ಜಿಲ್ಲೆಗಳ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಿಸಿದೆ. ಪ್ರಸ್ತುತ ಬರಪೀಡಿತ ತಾಲೂಕುಗಳಲ್ಲಿ 20.86 ಲಕ್ಷ ಕುಟುಂಬಗಳಿಗೆ 7.36 ಕೋಟಿ ಕೆಲಸದ ದಿನಗಳ ಉದ್ಯೋಗವನ್ನು ಒದಗಿಸಲಾಗಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ಬರ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಕ್ಕಾಗಿ ಬೇಡಿಕೆಯಿದ್ದು ರಾಜ್ಯ ಸರ್ಕಾರ ಈಗಾಗಲೇ 100 ದಿನಗಳಿಂದ 150 ದಿನಗಳವರೆಗೆ ಕೆಲಸದ ದಿನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬರ ಪೀಡಿತ ಪ್ರದೇಶಗಳಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 1234 ಲಕ್ಷ ಕೆಲಸದ ದಿನಗಳು ಮಂಜೂರಾಗಿದ್ದು, 100 ರಿಂದ 150 ದಿನಗಳಿಗೆ ಈ ಅವಧಿಯನ್ನು ಹೆಚ್ಚಿಸುವುದರಿಂದ ಒಟ್ಟು ಕೆಲಸದ ದಿನಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದ 5.5 ತಿಂಗಳಿನಲ್ಲಿ ಪ್ರತಿ ತಿಂಗಳು1.52 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ. ಪ್ರಸಕ್ತ ವರ್ಷಕ್ಕೆ 1300 ಲಕ್ಷ ಕೆಲಸದ ದಿನಗಳ ಅನುಮೋದನೆ ಮಾತ್ರ ಇದ್ದು, ಇದನ್ನು 1800 ಲಕ್ಷ ದಿನಗಳಿಗೆ ಹೆಚ್ಚಿಸುವುದರಿಂದ ರಾಜ್ಯದ ಕಾರ್ಮಿಕ ಬಜೆಟ್ ಬೇಗನೆ ಮುಗಿದು ಹೋಗಲಿದೆ ಎಂದಿದ್ದಾರೆ.
ಈ ಬರ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನರೇಗಾ ಕೆಲಸದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲು ಮತ್ತು ಕರ್ನಾಟಕದ ಆರ್ಥಿಕ ವರ್ಷ 2023-24ಕ್ಕೆ ಕಾರ್ಮಿಕ ಬಜೆಟ್ ಅನ್ನು 1300 ಲಕ್ಷದಿಂದ 1800
ಲಕ್ಷ ಕೆಲಸದ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ನರೇಗಾ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಉದ್ಯೋಗ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದ್ದು ವೈಯಕ್ತಿಕ ಹಾಗೂ ಸಮುದಾಯದ ಸ್ವತ್ತುಗಳನ್ನು ನಿರ್ಮಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕ 13 ಕೋಟಿ ಕೆಲಸದ ದಿನಗಳನ್ನು ಕಾರ್ಮಿಕ ಬಜೆಟ್’ನಲ್ಲಿ ಹಂಚಿಕೆ ಮಾಡಿದ್ದು ಈಗಾಗಲೇ 8.48 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.