Home ಕ್ರೈಂ ನ್ಯೂಸ್ ಷೇರು ಮಾರುಕಟ್ಟೆಯಲ್ಲಿ ನಷ್ಟ; ಸಾಲ ನೀಡಿದ ಉದ್ಯಮಿಯನ್ನೇ ಮುಗಿಸಲು ಹೊರಟ ಪಾಲುದಾರ ಬಂಧನ, ಸಿಕ್ಕಿದ್ದೇ ರೋಚಕ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಷೇರು ಮಾರುಕಟ್ಟೆಯಲ್ಲಿ ನಷ್ಟ; ಸಾಲ ನೀಡಿದ ಉದ್ಯಮಿಯನ್ನೇ ಮುಗಿಸಲು ಹೊರಟ ಪಾಲುದಾರ ಬಂಧನ, ಸಿಕ್ಕಿದ್ದೇ ರೋಚಕ!

Share
ಉದ್ಯಮಿ
Share

ವಸಾಯಿ (ಮಹಾರಾಷ್ಟ್ರ): ರೂ. 32 ಕೋಟಿ ಸಾಲವನ್ನು ಮರಳಿ ನೀಡದಿರಲು ಮತ್ತು ಕಂಪನಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ವಸಾಯಿ ಮೂಲದ ಕೈಗಾರಿಕೋದ್ಯಮಿ, ಉದ್ಯಮಿ ಮೋಹನ್ ಸಿಂಗ್ ಲಕ್ಷ್ಮಣ್ ಸಿಂಗ್ ಪಾರ್ಮರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಭೀಕರ ಪ್ರಕರಣವನ್ನು ಪಾಲ್ಘರ್ ಜಿಲ್ಲೆಯ ವಾಲೀವ್ ಪೊಲೀಸರು ಭೇದಿಸಿದ್ದಾರೆ. ಈ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಸೇರಿದಂತೆ ಒಟ್ಟು ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ಜುಲೈ 24 ರಂದು ರಾತ್ರಿ ವಸಾಯಿ ಪೂರ್ವದ ನಾಯ್ಕಪಾಡ ಪ್ರದೇಶದಲ್ಲಿರುವ ತಮ್ಮ ಕಚೇರಿಯಿಂದ ಹೊರಬಂದ ಮೋಹನ್ ಪಾರ್ಮರ್ ಅವರ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹತ್ತಿರದಿಂದ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಪಾರ್ಮರ್ ಅವರ ಹೆಗಲಿಗೆ ಗುಂಡು ತಗಲಿ ತೀವ್ರ ಗಾಯಗೊಂಡಿದ್ದರು. ಮೊದಲ ಗುಂಡು ಹಾರಿಸಿದ ನಂತರ ಪಿಸ್ತೂಲ್ ಜ್ಯಾಮ್ ಆಗಿದ್ದರಿಂದ, ದುಷ್ಕರ್ಮಿಗಳು ಪಿಸ್ತೂಲ್ ಹಿಂಭಾಗದಿಂದ ಹೊಡೆದು ಪರಾರಿಯಾಗಿದ್ದರು. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪಾರ್ಮರ್ ಚೇತರಿಸಿಕೊಳ್ಳುತ್ತಿದ್ದಾರೆ.

ಕೊಲೆ ಸಂಚಿನ ಮುಖ್ಯ ರೂವಾರಿ:

ಜಿಎಸ್ಎಂ ಫಾಯಿಲ್ಸ್ ಲಿಮಿಟೆಡ್‌ನ ಪಾಲುದಾರ ಸಾಗರ್ ಗಿರೀಶ್ ಭಾನುಶಾಲಿ ಈ ಸಂಪೂರ್ಣ ಸಂಚಿನ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಶೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿದ್ದ ಭಾನುಶಾಲಿ, ಪಾರ್ಮರ್ ಅವರಿಂದ ಸುಮಾರು 32 ಕೋಟಿ ರೂ. ಸಾಲ ಪಡೆದಿದ್ದ. ಈ ಸಾಲವನ್ನು ಮರುಪಾವತಿಸುವುದ ತಪ್ಪಿಸಲು ಹಾಗೂ ಕಂಪನಿಯ ಸಂಪೂರ್ಣ ಮಾಲೀಕತ್ವ ಪಡೆಯಲು ಪಾರ್ಮರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.

ಉತ್ತರ ಪ್ರದೇಶದಲ್ಲಿ ಆರೋಪಿಗಳ ಬಂಧನ:

ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಕಾಲ್ ಡಿಟೇಲ್ಸ್ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ನಡೆಸಿದ ಪೋಲಿಸರು, ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಬೈಕ್ ಗುರುತಿಸಿದ್ದಾರೆ. ತದನಂತರ ವಿಶೇಷ ಪೊಲೀಸ್ ತಂಡವು ಉತ್ತರ ಪ್ರದೇಶಕ್ಕೆ ತೆರಳಿ ಶೂಟರ್ ಸುಜಿತ್ ದೇವೇಂದ್ರಭಾಯಿ ಪಾಂಡೆ, ಶಸ್ತ್ರಾಸ್ತ್ರ ಸರಬರಾಜುದಾರ ಮನೋಜ್ ತಥೇರಾ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿದೆ. ಪ್ರಕರಣದ ಕುರಿತು ವಾಲೀವ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles