ಮುಂಬೈ: ದೇಶದಲ್ಲಿ ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ತಣ್ಣಗಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ‘ನೀಟ್’ (NEET-UG) ಹಗರಣದ ಬೆನ್ನಲ್ಲೇ, ಇದೀಗ ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (Maha TET) ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿದ್ದು, ಪರೀಕ್ಷೆಯನ್ನು ದಿಢೀರ್ ಮುಂದೂಡಲಾಗಿದೆ.
ಜೂನ್ 28 ರಂದು ನಡೆಯಬೇಕಿದ್ದ ಪರೀಕ್ಷೆಗೆ ಕೇವಲ 20 ಗಂಟೆಗಳು ಬಾಕಿ ಇರುವಾಗ ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿ (MSCE) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಥಾಣೆಯಲ್ಲಿ ಪೊಲೀಸರು ನಡೆಸಿದ ದಾಳಿಯ ವೇಳೆ ಪರೀಕ್ಷಾ ಪತ್ರಿಕೆಯನ್ನು ಹೋಲುವ ಪ್ರಶ್ನೆಗಳು ಕೆಲವರ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
6 ಲಕ್ಷ ಅಭ್ಯರ್ಥಿಗಳಿಗೆ ನಿರಾಸೆ:
ಈ ಪರೀಕ್ಷೆಗೆ ಸುಮಾರು 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ತಯಾರಿ ನಡೆಸಿದ್ದರು. ಪರೀಕ್ಷೆ ಮುಂದೂಡಿಕೆಯಿಂದ ಅಭ್ಯರ್ಥಿಗಳಿಗೆ ತೀವ್ರ ನಿರಾಸೆಯಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಮಂಡಳಿ ತಿಳಿಸಿದೆ. ಅಲ್ಲದೆ, ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಜಕೀಯ ಕೆಸರೆರಚಾಟ – ವಿಪಕ್ಷಗಳ ಆಕ್ರೋಶ:
ಈ ಪೇಪರ್ ಲೀಕ್ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ. ಕಾಂಗ್ರೆಸ್ ಪಕ್ಷವು ಟ್ವೀಟ್ ಮಾಡಿ, “ಬಿಜೆಪಿ ಆಡಳಿತದಲ್ಲಿ ಸೋರಿಕೆಯಾಗದ ಯಾವುದೇ ಪತ್ರಿಕೆ ಇಲ್ಲ. ಈ ಸರ್ಕಾರ ‘ಪೇಪರ್ ಲೀಕ್ ಸರ್ಕಾರ’ವಾಗಿ ಬದಲಾಗಿದೆ” ಎಂದು ಲೇವಡಿ ಮಾಡಿದೆ. ಇತ್ತ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, “ಸತತವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪರೀಕ್ಷಾ ಅಕ್ರಮಗಳು ನಡೆಯುತ್ತಿರುವುದು ಮೇಲಧಿಕಾರಿಗಳು ಮತ್ತು ರಾಜಕಾರಣಿಗಳ ಕುಮ್ಮಕ್ಕಿಲ್ಲದೆ ಸಾಧ್ಯವಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಠಿಣ ಕ್ರಮದ ಭರವಸೆ ನೀಡಿದ ಏಕನಾಥ್ ಶಿಂಧೆ:
ಪ್ರಕರಣದ ಗಂಭೀರತೆ ಅರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, “ಈ ಘಟನೆ ತೀವ್ರ ಆಕ್ರೋಶ ಉಂಟುಮಾಡಿದೆ. ಈ ಪೇಪರ್ ಲೀಕ್ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ, ಭ್ರಷ್ಟ ಅಧಿಕಾರಿಗಳಿದ್ದರೂ ಯಾರನ್ನೂ ಬಿಡುವುದಿಲ್ಲ. ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.





Leave a comment