
ಸಿಯೋನಿ (ಮಧ್ಯಪ್ರದೇಶ): ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಘನ್ಸೋರ್ ಪೊಲೀಸ್ ಠಾಣೆಯ ಅಧಿಕಾರಿಗಳು 1 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ನಿರಾಕರಿಸಿದ್ದಕ್ಕೆ ಯುವಕನೊಬ್ಬನನ್ನು ಸುಳ್ಳು ಗಾಂಜಾ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.
ಆದಿತ್ಯ ಯಾದವ್ ಎಂಬ ಯುವಕನ ಮೇ 1.2 ಕೆಜಿ ಗಾಂಜಾ ಸಾಗಾಟ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ, ಈ ಆರೋಪವನ್ನು ತಳ್ಳಿಹಾಕಿರುವ ಆದಿತ್ಯ ಪರ ವಕೀಲ ಪ್ರಮೋದ್ ಸಿಂಗ್ ತೋಮರ್, ಪೊಲೀಸರ ಲಂಚದ ಬೇಡಿಕೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಾಕ್ಷ್ಯವಾಗಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಪೊಲೀಸರು ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದಾಗಿಯೂ ದೂರುದಾರರು ಆರೋಪಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷ್ಯ: ಪೊಲೀಸರು ಲಂಚ ಕೇಳಿರುವ ಹಾಗೂ ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲು ಪೊಲೀಸ್ ಸಿಬ್ಬಂದಿ ಯತ್ನಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಎಲ್ಲಾ ಸಾಕ್ಷ್ಯಗಳನ್ನು ಹೈಕೋರ್ಟ್ ಅರ್ಜಿಯೊಂದಿಗೆ ಲಗತ್ತಿಸಲಾಗಿದೆ.
ಪತ್ನಿಯಿಂದಲೂ ದೂರು: ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಆದಿತ್ಯ ಅವರ ಪತ್ನಿ ಐಜಿ (IG) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿಎಂ ಸಹಾಯವಾಣಿಗೆ (CM Helpline) ನೀಡಿದ ದೂರು ವಾಪಸ್ ಪಡೆಯುವಂತೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಪೊಲೀಸರ ಸಮರ್ಥನೆ: ಅಕ್ಟೋಬರ್ 29 ರಂದು ಖಚಿತ ಮಾಹಿತಿ ಮೇರೆಗೆ ಬೈಕ್ನಲ್ಲಿ ಗಾಂಜಾ ಸಾಗಿಸುತ್ತಿದ್ದ ಆದಿತ್ಯನನ್ನು ಬಂಧಿಸಲಾಗಿದೆ ಎಂದು ಘನ್ಸೋರ್ ಠಾಣೆ ಇನ್ಸ್ಪೆಕ್ಟರ್ ಲಕ್ಷ್ಮಣ್ ಝರಿಯಾ ಸ್ಪಷ್ಟಪಡಿಸಿದ್ದಾರೆ. ಆತನ ವಿರುದ್ಧ ಈಗಾಗಲೇ 3 ಗಾಂಜಾ ಪ್ರಕರಣಗಳು ಸೇರಿದಂತೆ ಒಟ್ಟು 13 ಅಪರಾಧ ಪ್ರಕರಣಗಳಿದ್ದು, ಪೊಲೀಸರ ಮೇಲಿನ ಒತ್ತಡ ತರಲು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.




