SUDDIKSHANA KANNADA NEWS/ DAVANAGERE/ DATE:07-01-2024
ದಾವಣಗೆರೆ: ಈ ಪೊಲೀಸ್ ಏನು ಮಾಡಲಿಕ್ಕಾಗುವುದಿಲ್ಲ. ಇದು ಬ್ರಿಟೀಷ್ ರಾಜ್ಯವಲ್ಲ. ಕರಸೇವಕ ಶ್ರೀಕಾಂತ್ ಪೂಜಾರಿ ಕಣ್ಣಿಗೆ ಬಟ್ಟೆಕಟ್ಟಿ ಬಂಧಿಸಲಾಗಿತ್ತು. ತಾಕತ್ತಿದ್ದರೆ ನಾಳೆ ನಮ್ಮನ್ನು ಬಂಧಿಸಿ. ಈ ಸರ್ಕಾರ ಏನೇ ಆದೇಶ ನೀಡಬಹುದು. ಪೊಲೀಸರು ಸರ್ಕಾರದ ಗುಲಾಮರಾಗಬಾರದು. ನೀವು ಹಿಂದೂಗಳು, ನಮ್ಮ ಸಹೋದರರು. ನಾನು ಪೊಲೀಸರೊಂದಿಗೆ ಸಂಘರ್ಷ ಮಾಡೋದಿಲ್ಲ. ಸಂಘರ್ಷ ಪೊಲೀಸರ ವಿರುದ್ಧ ಅಲ್ಲ, ಸರ್ಕಾರದ ವಿರುದ್ಧ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಒಬ್ಬ ಹಿಂದೂ ಮುಟ್ಟಿದರೆ, ಬಂಧಿಸಿದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು, ಮಕ್ಕಳು ಬೀದಿಗಿಳಿಯುತ್ತೇವೆ. ಇದು ಸರ್ಕಾರಕ್ಕೆ ನೀಡುತ್ತಿರುವ ಎಚ್ಚರಿಕೆ ಎಂದರು.
ಸಿದ್ದರಾಮಯ್ಯ, ಶಿವಕುಮಾರ್ ಹೆಸರು ಎಷ್ಟು ಚೆನ್ನಾಗಿದೆ. ಅವರ ಪೋಷಕರು ಒಳ್ಳೆಯ ಹೆಸರು ಇಟ್ಟಿದ್ದಾರೆ. ಆದ್ರೆ, ಇಬ್ಬರು ಶ್ರೀರಾಮನ ಹೆಸರಿಗೆ ತದ್ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದಾರೆ. ಹಿಂದೂಗಳ ಪರವಾಗಿ
ನಡೆದುಕೊಳ್ಳಿ. ಮುಜರಾಯಿ ಇಲಾಖೆಗೆ ಬರುವ ಹಣವನ್ನು ದೇವಾಲಯಗಳಿಗೆ ಬಳಸಬೇಕು. ಬೇರೆಯವರಿಗೆ ನೀಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಜನಸೇವಕರು. ಅಯೋಧ್ಯೆಯಲ್ಲಿ ಪ್ರಭು ರಾಮಮಂದಿರದ ಉದ್ಘಾಟನೆ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್ ತೆಗೆಯಬಾರದು. ಸರ್ಕಾರ ಒತ್ತಡ ಹೇರಿದರೂ ಹಿಂದೂವಾಗಿ ನಿಮ್ಮ ಕೆಲಸ ನಿರ್ವಹಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೆರಿಗೆ ವಸೂಲಿಯಿಂದ ನಿಮಗೆ ಸಂಬಳ ಬರುತ್ತದೆ. ಯಾವ ಮುಖ್ಯಮಂತ್ರಿಗಳೂ ವೇತನ ನೀಡುವುದಿಲ್ಲ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಲ್ಲ. ಶಾಂತಿಯುತವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ಅವರು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಮುನ್ನ ಗೋಧ್ರಾ ಹತ್ಯಾಕಾಂಡದಂತೆ ಗಲಾಟೆ, ದೊಂಬಿ ಆಗುತ್ತದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ, ನಿಮ್ಮ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ. ಗೋಧ್ರಾ ಹತ್ಯಾಕಾಂಡ ಮರುಕಳಿಸುತ್ತದೆ ಎಂದು ಬಿ. ಕೆ. ಹರಿಪ್ರಸಾದ್ ಹೇಳುತ್ತಾರೆ. ಈ ಹೇಳಿಕೆ ಗಮನಿಸಿದರೆ ಸಿದ್ದರಾಮಯ್ಯರೇ ಟಾರ್ಗೆಟ್ ಇರಬಹುದು. ಸರ್ಕಾರ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ರಾಮಭಕ್ತರು, ಕರಸೇವಕರು ಹಾಗೂ ಶ್ರೀರಾಮನ ಶಾಪದಿಂದ ಈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಶ್ರೀಕಾಂತ್ ಪೂಜಾರಿ ಮೇಲಿದ್ದ ಹದಿನಾರು ಮೊಕದ್ದಮೆಗಳು ಖುಲಾಸೆಯಾಗಿವೆ. ಆತ ಹಿಂದೂ ಕರಸೇವಕ. ದೇಶದ್ರೋಹಿಗಳಂತೆ ಕರೆದುಕೊಂಡು ಹೋಗಿ ಬಂಧಿಸಿ ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿಯಲ್ಲಿ ಪೊಲೀಸ್ ಠಾಣೆ ಧ್ವಂಸ ಮಾಡಿದವರು, ಕಲ್ಲು ತೂರಿದವರು, ಭಯೋತ್ಪಾದಕರ ಮೊಕದ್ದಮೆ ವಾಪಸ್ ಪಡೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ತಾಕತ್ತಿದ್ದರೆ ಹಿಂದೂಗಳನ್ನು ಮುಟ್ಟಿ ನೋಡಿ. ಹಿಂದೂ ರಾಷ್ಟ್ರವಾದರೆ ಭಾರತ ದೇಶವು ಅಪ್ಘಾನಿಸ್ತಾನ, ಪಾಕಿಸ್ತಾನ ಆಗುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳುತ್ತಾರೆ. ಅಲ್ಪಸಂಖ್ಯಾತರಷ್ಟೇ ಮತ ಹಾಕಿಲ್ಲ, ಹಿಂದೂಗಳು ವೋಟ್ ಮಾಡಿದ್ದಾರೆ. ಸಿದ್ದರಾಮಯ್ಯ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು
ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ. ಸಿದ್ದರಾಮಯ್ಯ ದೇಶದ ಪ್ರಧಾನಿಗಳಲ್ಲ. ಸಚಿವ ದಿನೇಶ್ ಗುಂಡೂರಾವ್ ಮಠ ಮಂದಿರಗಳ ಮೇಲೆ ಹಿಂದೂ ಭಗವಾಧ್ವಜ ಹಾರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಹಿಂದೂ ಜಾಗ ವಿವಾದ ಎನ್ನುತ್ತಾರೆ. ಹೀಗೆಲ್ಲಾ ಯಾಕೆ ಮಾತನಾಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಮನೆ ಮನೆಗೆ ಹೋಗಿ ಈಗಾಗಲೇ ಮಂತ್ರಾಕ್ಷತೆ ನೀಡಲಾಗುತ್ತಿದೆ. ಜನವರಿ 22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಎಲ್ಲರೂ ಸಂಭ್ರಮದಿಂದ ಹಬ್ಬದಂತೆ ಆಚರಿಸೋಣ ಎಂದು ರೇಣುಕಾಚಾರ್ಯ ಹೇಳಿದರು.
ನಾವು ಭಯೋತ್ಪಾದಕರಲ್ಲ, ಶಾಂತಪ್ರಿಯರು. ಹಿಂದೂಗಳು. ಕಾನೂನು ಕೈಗೆತ್ತಿಕೊಳ್ಳದೇ ಶಾಂತಯುತವಾಗಿ ಜ. 8ರಂದು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ. ಕಾಂಗ್ರೆಸ್ ಮುಖಂಡರೂ ಪಾಲ್ಗೊಳ್ಳಿ. ಪ್ರಭು ಶ್ರೀರಾಮಚಂದ್ರ ಒಳ್ಳೆಯದು ಮಾಡುತ್ತಾನೆ. ಬೆಳಿಗ್ಗೆ 10. 30ಕ್ಕೆ ಶ್ರೀರಾಮಮಂದಿರದಿಂದ ಭಜನೆ, ಘೋಷಣೆ ಮೂಲಕ ಮೆರವಣಿಗೆ ನಡೆಸುತ್ತೇವೆ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕಿದರು.
ಈ ವೇಳೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಟಿ. ಜಿ. ರವಿಕುಮಾರ್, ಕಲ್ಲಿಂಗಪ್ಪ ಮತ್ತಿತರರು ಹಾಜರಿದ್ದರು.