ಲೂಧಿಯಾನ: ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಪ್ರೇಮ ವಿವಾಹವೊಂದರಲ್ಲಿ ಪತ್ನಿಯನ್ನು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ ಎಂಬ ಗಂಭೀರ ಆರೋಪವನ್ನು ವರ ಕರಣ್‌ವೀರ್ ಸಿಧು ಅವರ ಕುಟುಂಬ ತಳ್ಳಿಹಾಕಿದೆ. ಮತಾಂತರವು ಯುವತಿಯ ಪಾಲಕರ ಒಪ್ಪಿಗೆ ಮತ್ತು ಅವರ ಸಮ್ಮುಖದಲ್ಲೇ ನಡೆದಿದೆ ಎಂದು ವರನ ತಂದೆ ಸ್ಪಷ್ಟಪಡಿಸಿದ್ದಾರೆ.
ಕೃತ್ರಿಕಾ ವರ್ಮಾ ಎಂಬುವವರು ತಮ್ಮ ಪತಿ ಮತ್ತು ಅತ್ತೆಯಂದಿರು ಬಲವಂತವಾಗಿ ಮತಾಂತರ ಮಾಡಿ, ಹಲ್ಲೆ ನಡೆಸಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆದರೆ, ಈ ಎಲ್ಲಾ ಆರೋಪಗಳು ಸುಳ್ಳು ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿರುವ ವರನ ಕುಟುಂಬ, ಮಡದಿಯ ಕಡೆಯವರೇ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ನೀಡಿದೆ.
ಪಾಲಕರ ಸಮ್ಮುಖದಲ್ಲೇ ಧಾರ್ಮಿಕ ವಿಧಿ: ವರನ ತಂದೆ ಜತಿಂದರ್ ಸಿಂಗ್ (ಕ್ರಿಶ್ಚಿಯನ್ ಪಾಸ್ಟರ್) ಮಾತನಾಡಿ, ಕೃತ್ರಿಕಾ ಅವರ ಹೆತ್ತವರ ಸಮ್ಮುಖದಲ್ಲೇ ಧಾರ್ಮಿಕ ವಿಧಿವಿಧಾನಗಳು ನಡೆದಿವೆ ಎಂದಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಯುವತಿಯ ಪಾಲಕರೇ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮದುವೆ ವಿವರ: ಸೆಪ್ಟೆಂಬರ್ 2 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಸೆಪ್ಟೆಂಬರ್ 5 ರಂದು ಯುವತಿ ಗಂಡನ ಮನೆಗೆ ಬಂದಾಗ ಆಕೆಯ ಪಾಲಕರೂ ಜೊತೆಯಲ್ಲಿದ್ದರು ಎಂದು ಜತಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಹಲ್ಲೆ ಆರೋಪ: ಮದುವೆ ವಿಚಾರ ಕೌಟುಂಬಿಕ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕೃತ್ರಿಕಾ ಕಡೆಯ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕರಣ್‌ವೀರ್ ಸಿಧು ಹಾಗೂ ಅವರ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದು, ಎರಡೂ ಕಡೆಯವರ ವಾದ-ಪ್ರತಿವಾದಗಳು ತೀವ್ರು ಚರ್ಚೆಗೆ ಗ್ರಾಸವಾಗಿವೆ.





Leave a comment