ಲಕ್ನೋ: ಉತ್ತರ ಪ್ರದೇಶದ ಲಕ್ನೋ ಮೂಲದ ಉದ್ಯಮಿ ಶಿವ ಶರ್ಮಾ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ಇನ್ಫ್ಲುಯೆನ್ಸರ್ ಶ್ರದ್ಧಾ ದುಬೆ ನೇಪಾಳಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದು, ಶ್ರದ್ಧಾ ನೇಪಾಳ ಗಡಿ ದಾಟುತ್ತಿರುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಆಕೆಯ ಐಷಾರಾಮಿ ಎಸ್ಯುವಿ ಕಾರು ಪತ್ತೆಯಾಗಿರುವುದು ತನಿಖೆಗೆ ಪ್ರಮುಖ ತಿರುವು ನೀಡಿದೆ.
ಅಕ್ಟೋಬರ್ 9 ರಂದು ಲಕ್ನೋದ ತಮ್ಮ ಅಪಾರ್ಟ್ಮೆಂಟ್ನ 4 ನೇ ಮಹಡಿಯಿಂದ ಬಿದ್ದು ಶಿವ ಶರ್ಮಾ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಶ್ರದ್ಧಾ ದುಬೆ, ಆಕೆಯ ಸಹೋದರಿ ರಶ್ಮಿ ಮತ್ತು ಇತರರು ಶಿವ ಶರ್ಮಾನನ್ನು ಒತ್ತೆಯಾಳಾಗಿಟ್ಟುಕೊಂಡು ಕ್ರೂರವಾಗಿ ಚಿತ್ರಹಿಂಸೆ ನೀಡಿ, ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತನ ದೇಹದ ಮೇಲ್ಭಾಗದಲ್ಲಿ ಪಕ್ಕೆಲುಬು, ದವಡೆ ಹಾಗೂ ಕಾಲಿನ ಮೂಳೆಗಳು ಮುರಿದಿದ್ದು, ಸಿಗರೇಟ್ನಿಂದ ಸುಟ್ಟ ಗಾಯಗಳು ಪತ್ತೆಯಾಗಿವೆ.
ನೇಪಾಳದಲ್ಲಿ ಸಿಸಿಟಿವಿ ಸುಳಿವು: ಅಕ್ಟೋಬರ್ 10 ರ ಬೆಳಿಗ್ಗೆ ನೇಪಾಳ ಗಡಿಯ ಜಮುನಾಹಾ ಪೊಲೀಸ್ ಚೆಕ್ಪೋಸ್ಟ್ ಬಳಿ ಶ್ರದ್ಧಾ ದುಬೆ ಕಾಣಿಸಿಕೊಂಡಿರುವ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಆಕೆ ನೇಪಾಳದ ದಂಗ್ ಜಿಲ್ಲೆಯಲ್ಲಿ ಅಡಗಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಡಿಯಲ್ಲಿ ಕಾರು ಪತ್ತೆ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರೂಪೈಡಿಹಾ ಗಡಿ ಪ್ರದೇಶದಲ್ಲಿ ಶ್ರದ್ಧಾಗೆ ಸೇರಿದ ಎಸ್ಯುವಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ಆಕೆ ನೇಪಾಳಕ್ಕೆ ತೆರಳಿದ್ದಾಳೆ ಎಂದು ಹೇಳಲಾಗಿದೆ.
ವಿಡಿಯೋ ಸಂದೇಶ ಮತ್ತು ತನಿಖೆ: ವಿಡಿಯೋ ಬಿಡುಗಡೆ ಮಾಡಿರುವ ಶ್ರದ್ಧಾ, “ನಾನು ತಲೆಮರೆಸಿಕೊಂಡಿಲ್ಲ, ಪೊಲೀಸರಿಗೆ ಹೇಳಿಕೆ ನೀಡಲು ಸಿದ್ಧಳಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ” ಎಂದು ಹೇಳಿಕೊಂಡಿದ್ದಾಳೆ. ಆದಾಗ್ಯೂ, ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ‘ಸಚಿವಾಲಯ’ದ ಲೇಬಲ್ ಹೊಂದಿದ್ದ ಆಡಿ ಕಾರು ಹಾಗೂ ಭೂಗತ ಲೋಕದ ಗ್ಯಾಂಗ್ಸ್ಟರ್ಗಳ ಜೊತೆಗಿನ ಸಂಪರ್ಕದ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾ ದುಬೆ, ಆಕೆಯ ಸಹೋದರಿ, ಚಾಲಕ ಹಾಗೂ ಇಬ್ಬರು ಸಹಚರರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.





Leave a comment