ಬಸ್ತಿ, ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಿಂದೂ ಯುವಕನ ಸೋಗಿನಲ್ಲಿ ಯುವತಿಯರನ್ನು ನಂಬಿಸಿ, ಲೈಂಗಿಕ ಶೋಷಣೆ ಮಾಡಿ ನಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸೇರಿದಂತೆ ಎಂಟು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆಯ ವಿವರ:
ಸಂತ್ರಸ್ತ ಯುವತಿಯು ಬಸ್ತಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. 2022ರಲ್ಲಿ ಈಕೆಗೆ ಪ್ರಿನ್ಸ್ ಎಂಬ ಹೆಸರಿನಿಂದ ಪರಿಚಯವಾಗಿದ್ದ ಅಜ್ಫರುಲ್, ತಾನು ಹಿಂದೂ ಎಂದು ಸುಳ್ಳು ಹೇಳಿದ್ದನು. ಯುವತಿಯ ನಂಬಿಕೆ ಗಳಿಸಲು ಕೈಗೆ ಕೆಂಪು ದಾರ (ಕಲವ) ಕಟ್ಟಿಕೊಂಡು ಓಡಾಡುತ್ತಿದ್ದನು. ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯೊಂದಿಗೆ ಸ್ನೇಹ ಬೆಳೆಸಿ, ನಂತರ ಮದುವೆಯ ಆಮಿಷವೊಡ್ಡಿ ಸತತವಾಗಿ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಬೆದರಿಕೆ:
ಯುವತಿಯು ಮದುವೆಗೆ ಒತ್ತಾಯಿಸಿದಾಗ ಅಥವಾ ಆತನ ನೈಜ ಗುರುತಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಆತನ ಮನೆಗೆ ದೂರು ನೀಡಲು ಹೋದಾಗ, ಆರೋಪಿ ಅಜ್ಫರುಲ್, ಆತನ ಸಹೋದರ ಮತ್ತು ಇತರ ಸಹಚರರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಆಕೆಯ ಸಹೋದರನನ್ನು ಕೊಲ್ಲುವುದಾಗಿ ಮತ್ತು ಕುಟುಂಬಕ್ಕೆ ತೊಂದರೆ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದರು.
300 ಯುವತಿಯರಿಗೆ ವಂಚನೆಯ ಆರೋಪ:
ಸಂತ್ರಸ್ತೆಯು ನೀಡಿರುವ ದೂರಿನಲ್ಲಿ ಮತ್ತೊಂದು ಸ್ಪೋಟಕ ಅಂಶ ಬಯಲಾಗಿದೆ. ಆರೋಪಿ ಮತ್ತು ಆತನ ಕುಟುಂಬಸ್ಥರು ಸುಮಾರು 300ಕ್ಕೂ ಹೆಚ್ಚು ಯುವತಿಯರನ್ನು ಇದೇ ರೀತಿ ಹಿಂದೂ ಸೋಗಿನಲ್ಲಿ ನಂಬಿಸಿ, ಅವರ ಆಕ್ಷೇಪಾರ್ಹ ವೀಡಿಯೊಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಈ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುವ ಮತ್ತು ವಿದೇಶಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲವನ್ನು ಇವರು ನಡೆಸುತ್ತಿದ್ದಾರೆ ಎಂದು ಸಂತ್ರಸ್ತೆ ಗಂಭೀರವಾಗಿ ಆರೋಪಿಸಿದ್ದಾರೆ.
ಪೊಲೀಸ್ ಕ್ರಮ:
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಸ್ತಿ ಪೊಲೀಸರು, ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯ ಆರೋಪಿಯನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಲಾಗಿದ್ದು, ಈ ಪ್ರಕರಣದ ಹಿಂದೆ ಅಂತರಾಷ್ಟ್ರೀಯ ಮಾನವ
ಕಳ್ಳಸಾಗಣೆ ಜಾಲವಿದೆಯೇ ಎಂಬ ಬಗ್ಗೆ ಉಪ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.





Leave a comment