ಬೆಂಗಳೂರು: ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಕಳೆದ 5 ವರ್ಷಗಳಲ್ಲಿ 15 ನೇ ಹಣಕಾಸು ಆಯೋಗದ ಮೂಲಕ ಕೇಂದ್ರವು ಮಾಡಿದ ದ್ರೋಹದಿಂದ ಸುಮಾರು 70 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
READ ALSO THIS STORY: ಭವಿಷ್ಯದಲ್ಲಿ ಪೊಲೀಸ್ ವೃತ್ತಿ ಮತ್ತಷ್ಟು ಕಠಿಣ: ಐಜಿಪಿ ಡಾ. ರವಿಕಾಂತೇಗೌಡ ಆತಂಕ ವ್ಯಕ್ತಪಡಿಸಿದ್ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ನಾಡನ್ನು ಉದ್ದೇಶಿಸಿ ಮಾತನಾಡಿದರು.
15ನೇ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ಅನುದಾನ, ಕೇಂದ್ರವು ಬಜೆಟ್‌ನಲ್ಲಿ ಘೋಷಿಸಿ ಕೊಡದೆ ಹೋದ ಅನುದಾನ, ಯೋಜನೆಗಳಲ್ಲಾದ ಅನ್ಯಾಯ ಸೇರಿ ಸುಮಾರು 1 ಲಕ್ಷ ಕೋಟಿ ರೂಗಳಿಗೂ ಹೆಚ್ಚು ಅನ್ಯಾಯವಾಗಿದೆ. ಇದರ ವಿರುದ್ಧ ಸರ್ಕಾರ ಹೋರಾಟ ನಡೆಸುತ್ತಿದೆ. ಜನ ಸಮುದಾಯವು ಕೂಡ ಗಂಭಿರವಾಗಿ ಪ್ರಶ್ನಿಸಬೇಕಾದ ಅನಿವಾರ್ಯತೆ ಉದ್ಭವಿಸಿದೆ ಎಂದು ಪ್ರತಿಪಾದಿಸಿದರು.
ಬಲಿಷ್ಠ ಒಕ್ಕೂಟ ವ್ಯವಸ್ಥೆಯ ಕನಸು ನಮ್ಮ ಸಂವಿಧಾನ ಪಿತೃಗಳದ್ದಾಗಿತ್ತು. ಇದನ್ನು ಕಳೆದ ಕೆಲವು ವರ್ಷಗಳಿಂದ ಛಿದ್ರಗೊಳಿಸಿ ರಾಜ್ಯಗಳ ಅಧಿಕಾರವನ್ನು ಕಬ್ಜಾ ಮಾಡುವ ವಸಾಹತುವಾದಿ ಮನೋಭಾವ ಕಾಣುತ್ತಿದೆ. ಕೇಂದ್ರದ ಈ ತಾರತಮ್ಯಗಳ ವಿರುದ್ಧ ಇಡೀ ನಾಡು ಸಂವಿಧಾನಾತ್ಮಕವಾಗಿ ನಿಂತು ಪ್ರತಿಭಟಿಸದೆ ಹೋದರೆ ನಮ್ಮನ್ನು ಆಪೋಶನ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯ ಮಾತುಗಳನ್ನು ಆಡಿದರು.
ನಮ್ಮ ಹೊಸ ತಲೆಮಾರಿನ ಮೇಲೆ ಈ ನಾಡನ್ನು ಮುನ್ನಡೆಸುವ ಮತ್ತು ಸಮೃದ್ಧಗೊಳಿಸುವ ಮಹತ್ತರವಾದ ಜವಾಬ್ದಾರಿಯಿದೆ. ನಮ್ಮ ಹಿರಿಯರು ಬಹಳ ತ್ಯಾಗ ಮಾಡಿ ಈ ನಾಡನ್ನು ಕಟ್ಟಿದ್ದಾರೆ. ನಮ್ಮ ಗುರಿ ಅತ್ಯಂತ ಉದಾತ್ತವಾದ, ವೈಜ್ಞಾನಿಕವಾದ, ವೈಚಾರಿಕ ಮನೋಭಾವದ, ಮಾನವೀಯತೆಯ ನಾಡನ್ನು ಕಟ್ಟುವುದು. ಯುರೋಪಿನ ಸ್ಕ್ಯಾಯಂಡಿನೇವಿಯನ್ ದೇಶಗಳು ಈ ವಿಚಾರದಲ್ಲಿ ಬಹಳಷ್ಟನ್ನು ಸಾಧಿಸಿವೆ ಎಂದು ಆ ರೀತಿಯ ಮಾದರಿಗಳ ಕಡೆಗೆ ನಾವು ಮುನ್ನಡೆಯಬೇಕು ಮತ್ತು ನಮ್ಮವೇ ಆದ ಮಾದರಿಗಳನ್ನೂ ನಿರ್ಮಿಸಬೇಕು. ಆ ಉದ್ದೇಶದಿಂದಲೇ ನಾವು ಯೂನಿವರ್ಸಲ್ ಬೇಸಿಕ್ ಇನ್‌ಕಂ ಎಂಬ ಪರಿಕಲ್ಪನೆಯಡಿ ಜನರ ಖಾತೆಗಳಿಗೆ ನೇರವಾಗಿ ಹಣ
ವರ್ಗಾಯಿಸುತ್ತಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಕ್ರಾಂತಿಕಾರಕ ರೀತಿಯಲ್ಲಿ ಬದಲಾಯಿಸುತ್ತಿದ್ದೇವೆ. ರಸ್ತೆಗಳ ನಿರ್ಮಾಣಕ್ಕೆ, ವಿದ್ಯುತ್ ಉತ್ಪಾದನೆಗೆ, ಸಾರ್ವಜನಿಕ ಸಾರಿಗೆಯ ಸುಧಾರಣೆಗೆ, ರೈತರ ಮಾರುಕಟ್ಟೆ ವ್ಯವಸ್ಥೆಗೆ, ಕೈಗಾರಿಕೆಗಳ ಸ್ಥಾಪನೆಗೆ, ಶಿಕ್ಷಣಕ್ಕೆ ನಮ್ಮ ಸರ್ಕಾರ ಅತಿ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದು ಹೇಳಿದರು.
ಈ ವರ್ಷ ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ಶ್ರೀಮತಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿಯವರು ತಂದುಕೊಡುವ ಮೂಲಕ ನಮ್ಮ ಭಾಷೆಯ ಶಕ್ತಿಯನ್ನು ವಿಶ್ವ ವೇದಿಕೆಗೆ ಕೊಂಡೊಯ್ದಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.
ಒಕ್ಕೂಟ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಮಲತಾಯಿ ಧೋರಣೆಯನ್ನು ತೋರುತ್ತಿದೆ. 4.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಸಂಪತ್ತನ್ನು ಕರ್ನಾಟಕವು ನೀಡುತ್ತಿದೆ. ಆದರೆ ನಮಗೆ ಬಿಡಿಗಾಸು ಕೊಟ್ಟು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತಿದೆ. ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ನಿರಂತರ ಹುನ್ನಾರ ನಡೆಯುತ್ತಿದೆ. ಹಿಂದಿ, ಸಂಸ್ಕೃತ ಭಾಷೆಗಳ ಅಭಿವೃದ್ಧಿಗೆ ಮಾತ್ರ ಅನುದಾನಗಳನ್ನು ನೀಡಲಾಗುತ್ತಿದೆ. ಕನ್ನಡವೂ ಸೇರಿದಂತೆ ಉಳಿದ ದೇಶಭಾಷೆಗಳನ್ನು ನಿರ್ಲಕ್ಷಿಸಲಾಗುತ್ತಿದೆ.
ರಾಜ್ಯದ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಯೋಜನೆಗಳನ್ನು ಕರ್ನಾಟಕಕ್ಕೆ ಕೊಡದೆ ವಂಚಿಸಲಾಗುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದ್ದರೂ, ನೀಡಬೇಕಾದ ಅನುದಾನಗಳನ್ನೂ ಕೊಡದೆ ಅನ್ಯಾಯ ಮಾಡಲಾಗುತ್ತಿದೆ. ಕರ್ನಾಟಕ ವಿರೋಧಿಯಾದ ಎಲ್ಲವನ್ನೂ ವಿರೋಧಿಸಲೇಬೇಕಾಗಿದೆ. ನಾಡಿನ ಇತಿಹಾಸ, ಪರಂಪರೆಗಳ ನೆನಪುಗಳನ್ನು ಹೊಸ ತಲೆಮಾರುಗಳಲ್ಲಿ ಮೂಡಿಸಿ ಅವರಲ್ಲಿ ಅಭಿಮಾನ ಮೂಡಿಸೋಣ. ನಮಗಿರುವ ಸವಾಲುಗಳನ್ನೆ ಅವಕಾಶವಾಗಿ ಮಾರ್ಪಡಿಸುವ ಶಕ್ತಿ ನಮ್ಮ ಯುವ ತಲೆಮಾರಿಗಿದೆ. ಯುವ ತಲೆಮಾರು ಎದ್ದು ನಿಂತು ಕನ್ನಡ ಮತ್ತು ಕರ್ನಾಟಕವನ್ನು ಜಗತ್ತಿನ ಮುಂದುವರೆದ ಸಮಾಜಗಳ ಮಟ್ಟಕ್ಕೆ ನಿಲ್ಲಿಸಬೇಕಾಗಿದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದ ಬಲವರ್ಧನೆಗಾಗಿ ಈ ವರ್ಷ 65,000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸುತ್ತಿದ್ದೇವೆ. ನಮ್ಮ ವಸತಿ ಶಾಲೆಗಳು, ವಸತಿ ನಿಲಯಗಳಲ್ಲಿ 8.36 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ವಸತಿ ಶಾಲೆಗಳು, ವಸತಿ ನಿಲಯಗಳನ್ನು ಸ್ಥಾಪಿಸುತ್ತಿದ್ದೇವೆ. ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಪ್ರತ್ಯೇಕ ವಸತಿ
ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಕ್ಯಾನ್ಸರ್‌ನಿಂದ ಬಾಧಿತರಾದ ಮಕ್ಕಳಿಗೆ ವೈದ್ಯಕೀಯ ಬೆಂಬಲದೊAದಿಗೆ ಶಿಕ್ಷಣವನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು.






