SUDDIKSHANA KANNADA NEWS/ DAVANAGERE/ DATE:18-02-2025
ದಾವಣಗೆರೆ: ಜಿಲ್ಲಾ ನ್ಯಾಯಾಲಯ ಸೇರಿದಂತೆ ಎಲ್ಲಾ ತಾಲ್ಲೂಕಿನ ನ್ಯಾಯಾಲಯಗಳಲ್ಲಿ ಮಾರ್ಚ್ 8 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ಇಲ್ಲಿ ರಾಜೀಯಾಗಬಲ್ಲ ಎಲ್ಲ ಪ್ರಕರಣಗಳನ್ನು ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ನ್ಯಾಯಾಲಯದ ಆವರಣದಲ್ಲಿನ ವಕೀಲರ ಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತಾನಾಡಿದರು.
ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಉದ್ದೇಶಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಲೋಕ್ ಅದಾಲತ್ ನಡೆಯಲಿದೆ ಎಂದು ತಿಳಿಸಿದರು.
ಈ ಲೋಕ್ ಅದಾಲತ್ನಲ್ಲಿ ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇಧನ ಹೊರತುಪಡಿಸಿ), ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕೆ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಹಾಗೂ ಸಿವಿಲ್ ವ್ಯಾಜ್ಯಗಳಲ್ಲಿ ಪಕ್ಷಗಾರರು ಲೋಕ್ ಅದಾಲತ್ನಲ್ಲಿ ರಾಜಿಯಾದರೆ ಪಕ್ಷಗಾರರು ಸರ್ಕಾರಕ್ಕೆ ಪಾವತಿಸಿರುವ ನ್ಯಾಯಾಲಯದ ಶುಲ್ಕವನ್ನು ವಾಪಸ್ ಕೊಡಲು ಅವಕಾಶವಿದೆ ಎಂದರು.
1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಹೆಚ್.ಅಣ್ಣಯ್ಯನವರ್ ಮಾತನಾಡಿ ಲೋಕ ಅದಾಲತ್ನ ಮೂಲಕ ಸಾರ್ವಜನಿಕರಿಗೆ ಶೀಘ್ರ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಬಹು ಮುಖ್ಯವಾಗಿದೆ ಎಂದರು. ವಕೀಲರು ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ಅತ್ಯುತ್ತಮ ಮಾರ್ಗಗಳನ್ನು ನೀಡಬೇಕೆಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣನವರ ಮಾತನಾಡಿ ಲೋಕ್ ಅದಾಲತ್ನಲ್ಲಿ ಉಭಯ ಪಕ್ಷಗಾರರು ಪರಸ್ಪರ ಒಪ್ಪಿದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆಶಯದಂತೆ ಲೋಕ್ ಅದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯಾರ್ಥಪಡಿಸಲು ಲೋಕ್-ಅದಾಲತ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸಾರ್ವಜನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ ಅದಾಲತ್ನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಹೆಚ್ ಅರುಣಕುಮಾರ್, ದಾವಣಗೆರೆ ಘಟಕದ ನ್ಯಾಯಾಧೀಶರು, ವಕೀಲ ಸಂಘದ ಎಲ್ಲಾ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ಹಾಗೂ ಮಹಿಳಾ ನ್ಯಾಯವಾದಿಗಳು ಭಾಗವಹಿಸಿದ್ದರು.