Site icon Kannada News-suddikshana

ಮದ್ಯ, ಮಾದಕ ದ್ರವ್ಯಗಳು ಯುವಕರಿಗೆ ಸಿಗುವಂತೆ ಮಾಡಿ ದೇಶಗಳನ್ನೇ ನಾಶಪಡಿಸಲಾಗ್ತಿದೆ: ಐಜಿ ರವಿಕಾಂತೇಗೌಡ

ಮದ್ಯ

SUDDIKSHANA KANNADA NEWS/ DAVANAGERE/ DATE-26-06-2025

ದಾವಣಗೆರೆ: ಮದ್ಯ, ಮಾದಕ ದ್ರವ್ಯಗಳು ಯುವಕರಿಗೆ ಲಭ್ಯವಾಗುವಂತೆ ಮಾಡುವ ಮೂಲಕ ಕೆಲವು ದೇಶಗಳು ದೇಶವನ್ನು ನಾಶಪಡಿಸುತ್ತಿವೆ ಎಂದು ಪೂರ್ವವಲಯ ಐಜಿ ರವಿಕಾಂತೇಗೌಡ ತಿಳಿಸಿದರು.

ಭಯೋತ್ಪಾದಕರು ನಡೆಸಿದ ಕೃತ್ಯಕ್ಕೆ ಆ ಭಯೋತ್ಪಾದಕ ಬಲಿಯಾಗುತ್ತಾನೆ. ಆದರೆ ಯಾವುದೇ ಒಂದು ದೇಶವನ್ನು ನಾಶ ಮಾಡಲು ಯುದ್ದ ಮಾಡುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದರು.

ನಗರದ ದೊಡ್ಡಬಾತಿ ಸಮೀಪದ ತಪೋವನ ಆಯುರ್ವೇದಿಕ್ ಮತ್ತು ಮೆಡಿಕಲ್ ಕಾಲೇಜ್ ಆವರಣದಲ್ಲಿ ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ತಪೋವನ ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಕಾಲೇಜ್ ಹಾಗೂ ಹರಿಹರದ ಸ್ಪಂದನ ಮದ್ಯವ್ಯಸನಿಗಳ ಪುನರ್ವಸತಿ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತುವಿನ ವಿರೋಧಿ ದಿನಾಚರಣೆ ಅಂಗವಾಗಿ ಮಾದಕ ವಸ್ತುವಿನ ವ್ಯಸನವನ್ನು ತಡೆಗಟ್ಟುವ ಕುರಿತು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸುದ್ದಿಯನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರೇಣುಕಾಚಾರ್ಯ ಕೋಟ್ಯಂತರ ರೂ. ಪಡೆದಿದ್ದಕ್ಕೆ ದಾಖಲೆ ಇದೆ: ಶಿವಗಂಗಾಬಸವರಾಜ್ ಸ್ಫೋಟಕ ಆರೋಪ!

ಪ್ರಪಂಚದಲ್ಲಿ ಪ್ರಮುಖವಾಗಿ ಭಯೋತ್ಪಾದನೆ ಮತ್ತು ಮಾದಕ ದ್ರವ್ಯ ವ್ಯಸನ ಈ ಎರಡು ಪ್ರಮುಖ ಸಮಸ್ಯೆಗಳನ್ನು ಕಾಣಬಹುದು. ಭಯೋತ್ಪಾದನೆ ಎಂಬುದು ಒಂದು ಪಿಡುಗು. ಇದು ಯಾವುದೋ ಒಂದು ಸ್ಥಳ, ಸಂಸ್ಥೆ, ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತದೆ. ಇದರಿಂದ ಮಾನವ ಸಂಪನ್ಮೂಲ ಮೂಭೂತ ಸೌಕರ್ಯಗಳು ಸಂಪೂರ್ಣವಾಗಿ ನಾಶವಾಗುತ್ತದೆ. ಆದರೆ ಮಾದಕ ದ್ರವ್ಯ ವ್ಯಸನ ಇಡೀ ಪ್ರಪಂಚವನ್ನೇ ಕಾಡುತ್ತಿರುವ ಮತ್ತೊಂದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ಈ ವ್ಯಸನಗಳಿಗೆ ಬಲಿಯಾದ ವ್ಯಕ್ತಿ ಪ್ರತಿಯೊಂದು ಕ್ಷಣವೂ ಜೀವನ್ಮರಣ ಹೋರಾಟ ನಡೆಸುತ್ತಾನೆ ಎಂದು ಹೇಳಿದರು.

ಮದ್ಯ ತ್ಯಜಿಸಿ: 

ಯುವ ಸಮುದಾಯ ಮದ್ಯ, ಮಾದಕ ವಸ್ತುಗಳ ಸೇವನೆಗೆ ಪ್ರೇರೇಪಣೆಯಾಗದೇ ದುಶ್ಚಟಗಳಿಗೆ ಬಲಿಯಾಗದಿರಿ. ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿದ್ದೀರಿ, ಸಮಾಜದ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವ ಶಕ್ತಿ ನಿಮ್ಮಲ್ಲಿದೆ. ಮನಸ್ಸಿನ ಆರೋಗ್ಯ ಕಾಪಾಡಿಕೊಂಡಲ್ಲಿ ದೈಹಿಕ ಆರೋಗ್ಯ ಉತ್ತಮವಾಗಿರಲಿದೆ. ಈ ಹಿನ್ನೆಲೆಯಲ್ಲಿ ದೇಶವು ವ್ಯಸನಮುಕ್ತ ರಾಷ್ಟ್ರವಾಗಲಿ, ಹಾಗಾಗಿ ಯಾವ ದೇಶ ವ್ಯಸನಮುಕ್ತ ರಾಷ್ಟ್ರವಾಗುವುದೋ ಆ ದೇಶವೂ ಪ್ರಗತಿಶೀಲ ರಾಷ್ಟ್ರವಾಗುವುದು. ನಮ್ಮ ದೇಶವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕಾದರೆ ಇಂತಹ ದುಶ್ಚಟ, ವ್ಯಸನಗಳಿಗೆ ಬಲಿಯಾಗದೇ ಇದರ ವಿರುದ್ಧ ಹೋರಾಡೋಣ ಎಂದರು.

ಈ ಸುದ್ದಿಯನ್ನೂ ಓದಿ: “ಆಣೆ ಪ್ರಮಾಣಕ್ಕೆ ಸಿದ್ಧನಿದ್ದೇನೆ”: Channagiri ಶಾಸಕರ ಪಂಥಾಹ್ವಾನ ಸ್ವೀಕರಿಸಿದ ಎಂ. ಪಿ. ರೇಣುಕಾಚಾರ್ಯ!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಮದ್ಯ, ಮಾದಕ ವ್ಯಸನದಿಂದ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಗಾಢವಾದ ಪರಿಣಾಮ ಬೀರುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲೆ ದುಷ್ಪರಿಣಾಮ ಬೀರದೆ, ಇಡೀ ಕುಟುಂಬವೇ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇಂತಹ ಕಾರ್ಯಕ್ರಮ ಈ ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಕರ್ತವ್ಯದಲ್ಲಿ ತೊಡಿಗಿಸಿಕೊಂಡು ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ತಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ತಿಳಿಸಿ ಮದ್ಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕುರಿತು ಪ್ರತಿಜ್ಞಾವಿಧಿ ಭೋಧಿಸಿದರು. ತಪೋವನ ಸಮೂಹ ಸಂಸ್ಥೆಯ ನಿರ್ದೇಶಕ ಡಾ.ಶಶಿಕುಮಾರ್ ವಿ ಮೆಹರ್ವಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ವಿಶೇಷಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಡಾ. ಕೆ ಕೆ.ಪ್ರಕಾಶ್, ನಗರ ಸಿಇಎನ್ ಠಾಣಾ ಇನ್ ಸ್ಪೆಕ್ಟರ್ ಹೆಚ್.ಸಿ.ವಸಂತ್, ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರಾದ ಡಾ. ಕೆ. ಆರ್. ಅಶ್ವಿನಿ, ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲೆ ಡಾ. ಸುಮನಾ ಭಟ್, ತಪೋವನ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಶೈಲಜಾ ಬಿ. ಆರ್. ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version