SUDDIKSHANA KANNADA NEWS/ DAVANAGERE/ DATE-26-06-2025
ದಾವಣಗೆರೆ: ಲೋಕಸಭೆ ಚುನಾವಣೆ ವೇಳೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಸೋಲಿಸಲು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಕೋಟ್ಯಂತರ ರೂಪಾಯಿ ದುಡ್ಡು ಪಡೆದಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಎಷ್ಟು ಕೋಟಿ ರೂಪಾಯಿ ಪಡೆದಿದ್ದೀಯಾ. ಯಾರು ಬಂದು ಕೊಟ್ರು, ಎಲ್ಲಿ ನೀನು ತೆಗೆದುಕೊಂಡಿದ್ದೀಯಾ. ದಾಖಲೆ ಸಮೇತ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ನೀಡುತ್ತೇನೆ ಎಂದು ಹೇಳುವ ಮೂಲಕ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸ್ಫೋಟಕ ಆರೋಪ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Davanagere: “ಶಾಂತನಗೌಡರ ಜಾಗದಲ್ಲಿ ನಾನಿದ್ದರೆ ರಾಜಕೀಯ ಏನೆಂದು ತೋರಿಸ್ತಿದ್ದೆ”: ಬುಸುಗುಟ್ಟಿದ ಬಸವರಾಜ್!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀನು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡು. ನಾನು ದಾಖಲೆ ಮುಂದಿಟ್ಟು ಪ್ರಮಾಣೀಕರಿಸುತ್ತೇನೆ. ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರ ಮನೆಗೆ ಬಾಗಿಲಿಗೆ ಬಂದದ್ದು ನಮಗೆ ಗೊತ್ತಿದೆ. ಎಲ್ಲವೂ ಬಿಚ್ಚಿಟ್ಟರೆ ಮಾನ, ಮರ್ಯಾದೆಯೂ ಇರಲ್ಲ ಎಂದು ರೇಣುಕಾಚಾರ್ಯ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವ ಮುನ್ನ ಎಲ್ಲವೂ ಸರಿ ಇತ್ತು. ಆನಂತರ ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ಘೋಷಿಸುತ್ತಿದ್ದಂತೆ ರೇಣುಕಾಚಾರ್ಯ ವರಸೆ ಬದಲಾಯಿತು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಕಾರಣ ಬಿಜೆಪಿಯಲ್ಲೇ ಉಳಿದಿದ್ದೆ. ಮಂತ್ರಿಗಾಗಿ ಯಡಿಯೂರಪ್ಪ ವಿರುದ್ದ ರೆಸಾರ್ಟ್ ಹೋಗಿದ್ದು ಗೊತ್ತು. ಸಿಗಂಧೂರು ಚೌಡೇಶ್ವರಿ, ಕಟೀಲು ದುರ್ಗಾ ಪರಮೇಶ್ವರಿ ಸೇರಿದಂತೆ ಯಾವ ದೇವರ ಮೇಲೆ ಬೇಕಾದರೂ ಪ್ರಮಾಣ ಮಾಡಲಿ. ನಾನೂ ಸಿದ್ದನಿದ್ದೇನೆ.
ಲೋಕಸಭೆ (Lok Sabha) ಚುನಾವಣೆಯಲ್ಲಿ ಗೆದ್ದದ್ದು ಸ್ವಂತಬಲದಿಂದ:
ಕಾಂಗ್ರೆಸ್ ಗೆದ್ದದ್ದು ಸ್ವಂತ ಬಲದಿಂದ. ವಿರೋಧಿಗಳು ಸುಮ್ಮನಿರಲು ಒಪ್ಪಿದರೆ ನಾವು ಏನಾದರೂ ಮಾಡಬೇಕಲ್ವಾ. ದಾವಣಗೆರೆಯಲ್ಲಿ ಹೊಂದಾಣಿಕೆ ಮಾಡಿಕೊಂಡೇ ಲೋಕಸಭೆ ಚುನಾವಣೆ ಎದುರಿಸಿದ್ದು. ಸಿದ್ದೇಶ್ವರ ಅವರ ಪತ್ನಿ ಸೋಲಬೇಕಾದದ್ದು ರೇಣುಕಾಚಾರ್ಯರಿಗೆ ಬೇಕಾಗಿತ್ತು. ಹಾಗಾಗಿ, ನಮಗೆ ಬೆಂಬಲಿಸಿದರು. ನಮಗೆ ಸಹಕಾರ ನೀಡಿದ್ದಾರೆ ಎಂಬ ಕಾರಣಕ್ಕೆ ಸುಮ್ಮನಿದ್ದೆವು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ಎಂ. ಪಿ. ರೇಣುಕಾಚಾರ್ಯಗೆ ಬಸವರಾಜ್ ಶಿವಗಂಗಾ ಪಂಥಾಹ್ವಾನ: ನಾನು ಪ್ರಮಾಣಕ್ಕೆ ಸಿದ್ಧ, ನೀನೂ ಸಿದ್ಧನಾ?
ನಾನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ. ಬಿಜೆಪಿ ಸೋಲಬೇಕಾಗಿದ್ದು ಆತನಿಗೆ ಬೇಕಾಗಿತ್ತು. ನಮ್ಮ ಪಂಥಹ್ವಾನಕ್ಕೆ ಅಂದೇ ಯಾಕೆ ಉತ್ತರ ನೀಡಲಿಲ್ಲ. ಸವಾಲಾಗಿ ಪರಿಗಣಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲಿಲ್ಲ. ಆತನಿಗೂ ಗಾಯತ್ರಿ ಸಿದ್ದೇಶ್ವರ ಗೆಲ್ಲಲೇಬಾರದಿತ್ತು. ಹಾಗಾಗಿ, ಏನೆಲ್ಲಾ ಮಾಡಿದ್ದಾನೆ ಎಂಬುದು ನನಗೂ ಗೊತ್ತು. ಇನ್ನೂ ಮುಂದೆ ಇದೇ ರೀತಿ ಮಾತನಾಡಿದರೆ ಎಲ್ಲವನ್ನೂ ದಾಖಲೆ ಸಮೇತ ಬಹಿರಂಗ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.