ಲಾತೂರ್, ಮಹಾರಾಷ್ಟ್ರ:ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭಕ್ತರ ಮೂಢನಂಬಿಕೆಯನ್ನು ಬಂಡವಾಳ ಮಾಡಿಕೊಂಡು, 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘೋರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ‘ರಾಮೇಶ್ವರ್ ರಾಮದಾಸಿ ಮಹಾರಾಜ್’ ಎಂಬ ನಕಲಿ ಸ್ವಾಮೀಜಿಯನ್ನು (ಬಾಬಾ) ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಲಾತೂರ್ ನಗರದ ಠಾಕ್ರೆ ಚೌಕ್ ಮೂಲದ ಕುಟುಂಬವೊಂದು ತಮ್ಮ 17 ವರ್ಷದ ಮಗಳ ಜನ್ಮ ಕುಂಡಲಿ (ಜಾತಕ) ತಯಾರಿಸಲು ಈ ನಕಲಿ ಬಾಬಾ ರಾಮೇಶ್ವರ್ ರಾಮದಾಸಿ ಬಳಿ ತೆರಳಿದ್ದರು. ಈ ವೇಳೆ ಬಾಲಕಿಯ ಜಾತಕದಲ್ಲಿ ತೀವ್ರವಾದ ‘ಕುಂಡಲಿ ದೋಷ’ವಿದ್ದು, ಅದನ್ನು ವಿಶೇಷ ಪೂಜೆ ಹಾಗೂ ವಿಧಿವಿಧಾನಗಳ ಮೂಲಕ ಪರಿಹರಿಸಬೇಕೆಂದು ಆತ ಪೋಷಕರನ್ನು ನಂಬಿಸಿದ್ದನು.
ಕೊಠಡಿಯೊಳಗೆ ಅತ್ಯಾಚಾರ ಹಾಗೂ ಬೆದರಿಕೆ:
ಪೂಜೆ ನಡೆಸಲು ಬಾಲಕಿಯ ಮನೆಗೆ ಬಂದ ನಕಲಿ ಬಾಬಾ, ಮಂತ್ರ ಜಪಿಸಬೇಕೆಂಬ ನೆಪದಲ್ಲಿ ಪೋಷಕರನ್ನು ಕೊಠಡಿಯಿಂದ ಹೊರಗೆ ಕಳುಹಿಸಿದ್ದನು. ಕೊಠಡಿಯೊಳಗೆ ಬಾಲಕಿ ಏಕಾಂಗಿಯಾಗಿದ್ದಾಗ, “ನಿನ್ನ ಕುಂಡಲಿ ದೋಷ ನಿವಾರಣೆಯಾಗಬೇಕಾದರೆ ನನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲೇಬೇಕು” ಎಂದು ಆಕೆಯನ್ನು ದಾರಿ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ದೋಷ ಎಂದಿಗೂ ಪರಿಹಾರವಾಗುವುದಿಲ್ಲ ಎಂದು ಬೆದರಿಕೆ ಹಾಕಿದ್ದನು.
ಗರ್ಭಿಣಿಯಾದ ಬಳಿಕ ಬೆಳಕಿಗೆ ಬಂದ ಕೃತ್ಯ:
ಕೆಲ ದಿನಗಳ ನಂತರ ಅಪ್ರಾಪ್ತ ಬಾಲಕಿ ಗರ್ಭಿಣಿಯಾದಾಗ, ಭಯಗೊಂಡು ಪೋಷಕರಿಗೆ ನಡೆದ ದೌರ್ಜನ್ಯದ ಬಗ್ಗೆ ಸತ್ಯ ತಿಳಿಸಿದ್ದಾಳೆ. ವಿಷಯ ತಿಳಿದ ತಕ್ಷಣ ಪೋಷಕರು ಲಾತೂರ್‌ನ ವಿವೇಕಾನಂದ ಚೌಕ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪೋಕ್ಸೋ ಹಾಗೂ ಮೂಢನಂಬಿಕೆ ಪ್ರತಿಷೇಧ ಕಾಯ್ದೆಯಡಿ ದೂರು:
ಪೊಲೀಸರು ಆರೋಪಿ ರಾಮೇಶ್ವರ್ ರಾಮದಾಸಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), ಪೋಕ್ಸೋ (POCSO) ಕಾಯ್ದೆ ಹಾಗೂ ‘ಮಹಾರಾಷ್ಟ್ರ ಮೂಢನಂಬಿಕೆ ಮತ್ತು ಅಂಧಶ್ರದ್ಧೆ ನಿರ್ಮೂಲನಾ ಕಾಯ್ದೆ’ಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.





Leave a comment