ಹೈದರಾಬಾದ್: ಮಹಿಳಾ ಸುರಕ್ಷತೆಯ ಬಗ್ಗೆ ಕೇವಲ ವರದಿಗಳನ್ನು ನಂಬದೆ, ಸ್ವತಃ ವಾಸ್ತವ ತಿಳಿಯಲು ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ಕೈಗೊಂಡ ‘ಅಂಡರ್‌ಕವರ್’ ಕಾರ್ಯಾಚರಣೆ ಆಘಾತಕಾರಿ ಸತ್ಯವನ್ನು ಹೊರಗೆ ಹಾಕಿದೆ. ಮಹಿಳಾ ಅಧಿಕಾರಿಗೆ ಕಿರುಕುಳ ನೀಡಿದವರಲ್ಲಿ ಕೆಲಸ ಇಲ್ಲದವರು, ಯುವಕರೇ ಹೆಚ್ಚಿದ್ದಾರೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ನಗರದ ದಿಲ್‌ಸುಖ್ ನಗರ ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯರಾತ್ರಿ 12:30 ರಿಂದ ಮುಂಜಾನೆ 3:30 ರವರೆಗೆ ಸಾಮಾನ್ಯ ಪ್ರಯಾಣಿಕಳಂತೆ ಒಬ್ಬರೇ ನಿಂತಿದ್ದ ಕಮಿಷನರ್ ಸುಮತಿ ಅವರಿಗೆ ಕೇವಲ ಮೂರು ಗಂಟೆಗಳಲ್ಲಿ ಸುಮಾರು 40 ಪುರುಷರು ಕಿರುಕುಳ ನೀಡಲು ಮುಂದಾಗಿದ್ದಾರೆ.
ನಡೆದದ್ದೇನು?
ಇತ್ತೀಚೆಗಷ್ಟೇ ಮಲ್ಕಾಜ್‌ಗಿರಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಸುಮತಿ ಅವರು, ಸಮವಸ್ತ್ರ ಮತ್ತು ಯಾವುದೇ ಭದ್ರತೆಯಿಲ್ಲದೆ ಸಾಮಾನ್ಯ ಮಹಿಳೆಯಂತೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕರು ಮತ್ತು ಮಧ್ಯವಯಸ್ಕರು ಅವರ ಬಳಿ ಅಸಭ್ಯವಾಗಿ ಮಾತನಾಡಲು ಯತ್ನಿಸಿದ್ದಾರೆ. ಕಿರುಕುಳ ನೀಡಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದು, ಕೆಲವರು ಮದ್ಯ ಹಾಗೂ ಗಾಂಜಾ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ.
ಕಮಿಷನರ್ ಅವರ ರಕ್ಷಣೆಗಾಗಿ ಮಫ್ತಿಯಲ್ಲಿ ಸ್ವಲ್ಪ ದೂರದಲ್ಲೇ ಇದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಿರುಕುಳ ನೀಡಿದವರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರಿಗೆ ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ನಡೆಸಿ, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ರಾತ್ರಿ ವೇಳೆ ಮಹಿಳೆಯರು ಎದುರಿಸುವ ಸವಾಲುಗಳನ್ನು ಅರಿಯಲು ಈ ಕಾರ್ಯಾಚರಣೆ ನಡೆಸಲಾಗಿದ್ದು, ನಗರದ ಮಹಿಳಾ ಸುರಕ್ಷತೆಯ ಬಗ್ಗೆ ಇದು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.





Leave a comment