SUDDIKSHANA KANNADA NEWS/ DAVANAGERE/ DATE:02-12-2024
ಬೆಂಗಳೂರು: ಆರ್ ಟಿ ನಗರದ ತರಳಬಾಳು ಕೇಂದ್ರದಲ್ಲಿ ತರಳಬಾಳು ಸಮಿತಿ ಆಯೋಜಿಸಿದ್ದ ಹಾಸ್ಯ ಸಂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯ ಸಂಜೆಯಲ್ಲಿ ನಗೆಗಡಲಿನಲ್ಲಿ ಸಭಿಕರು ಮಿಂದೆದ್ದರು.
ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಕೇಂದ್ರದ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮವು ನಗುವಿನ ಹಬ್ಬದಂತಾಗಿತ್ತು.
ಕಾರ್ತಿಕ ಮಾಸ, ಬೆಂಗಳೂರಿನಲ್ಲಿ ಮೋಡ ಮುಸುಕಿದ ಅತೀ ತಂಪಿನ ವಾತಾವರಣ, ಚಳಿಗೆ ಜನ ಸಂಜೆಯ ನಂತರ ಹೊರ ಬಾರದ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲಿಯೂ ಸಾವಿರ ಸಂಖ್ಯೆಯಲ್ಲಿ ಸೇರಿದ್ದ ಹಾಸ್ಯ ಸಂಜೆಯ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ವಾಗ್ಮಿಗಳಾದ ಪ್ರೋ.ಕೃಷ್ಣೇಗೌಡರಿಂದ ಬಂದ ಪ್ರತಿ ಮಾತು ಅರ್ಥಪೂರ್ಣವಾಗಿತ್ತು.
ಬದುಕಿನ ಸೌಂದರ್ಯತೆಯನ್ನು ಅನುಭವಿಸುವ ಜೊತೆ ಬದುಕಿನಲ್ಲಿ ಏನು ಮಾಡಿದರು ಇಷ್ಟಪಟ್ಟು ಮಾಡಬೇಕು, ಬೇರೆಯವರಿಗೆ ಅಲ್ಲ ನಮಗೋಸ್ಕರ ನಮ್ಮ ಸಂತೋಷಕ್ಕಾಗಿ ಮಾಡಿ ಅದನ್ನು ಅನುಭವಿಸಬೇಕು. ಪ್ರತಿಯೊಂದನ್ನು
ರಚನಾತ್ಮಕ, ಭಾವನಾತ್ಮಕ ಮತ್ತು ಪ್ರಶಂಸನೀಯ ದೃಷ್ಟಿಯಿಂದ ನೋಡುವ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಹಾಸ್ಯದಲ್ಲಿ ಪ್ರತಿಸಲ ಹೊಸತನ್ನು ನಿರೀಕ್ಷಿಸುತ್ತಾರೆ. ಇದು ನಮಗೊಂದು ಸವಾಲಿದ್ದಂತೆ. ನಮ್ಮ ದಿನನಿತ್ಯದ ಬದುಕಲ್ಲಿ
ಹೊಸತು ಸಿಗುತ್ತದೆ, ನಮ್ಮನ್ನು ನಮ್ಮಿಂದ ಹೊರಗಡೆ ನಿಂತು ನೋಡಿದರೆ ಅನೇಕ ತಮಾಷೆಗಳು ಕಾಣಸಿಗುತ್ತವೆ.ಎಂದು ಅಭಿಮತಿಸಿ ಮಾತು ಆರಂಭಿಸಿದ ಪ್ರೊ. ಕೃಷ್ಣೇಗೌಡರು ಕಂಠದಿಂದ ಹೊರ ಬಂದ ಹಾಸ್ಯ ಚಟಾಕಿಗಳು ಸಂಪದ್ಭರಿತ
ತಮಾಷೆಯ ಮಳೆ ಸುರಿಸಿದವು.
ತರಳಬಾಳು ಮಠವು ನನಗೆ ಅತಿ ದೊಡ್ಡದಾದ ಗೌರವವನ್ನು ನೀಡಿದೆ. ಕಳೆದ 35 ವರ್ಷಗಳಿಂದ ತರಳಬಾಳು ಜಗದ್ಗುರುಗಳವರ ದಿವ್ಯ ಸಾನ್ನಿಧ್ಯದ ಕಾರ್ಯಕ್ರಮಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ತರಳಬಾಳು ಹುಣ್ಣಿಮೆ ಮಹೋತ್ಸವದ ಖಾಯಂ ಅತಿಥಿಯಾಗಿ ಭಾಗವಹಿಸಿದ್ದೇನೆ ತರಳಬಾಳು ಮಠಕ್ಕೆ ಬರುವುದೆಂದರೆ ನನಗೆ ಧನ್ಯತೆಯ ಭಾವ ಮೂಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಹಾಸ್ಯದ ಮೋಡಿ ಮಾಡಿದ ಡಾ.ಬೆಣ್ಣೆ ಮತ್ತು ಕೋಗಳಿ ಕೊಟ್ರೇಶ್ ಜೋಡಿ:
ಪಶು ವೈದ್ಯರಾದ ಡಾ. ಬಸವರಾಜ ಬೆಣ್ಣೆ ರವರು ತಮ್ಮ ವೃತ್ತಿ ಬದುಕಿನ ಹಾಸ್ಯ ಸಂದರ್ಭಗಳ ಜೊತೆ ಉತ್ತರ ಕರ್ನಾಟಕದ ಜವಾರಿ ಹಾಸ್ಯ ಸೊಗಡನ್ನು ಉಣಬಡಿಸಿದರು. ಶರಣ ಕೋಗಳಿ ಕೊಟ್ರೇಶ್ ರವರ ಹಾಸ್ಯ ಭಾಷಣಕ್ಕೆ ಜನರು ಬಿದ್ದು ಬಿದ್ದು ನಕ್ಕರು. ಧ್ವನಿಯಿಂದ ವಿವಿಧ ವಾದ್ಯಗಳನ್ನು ನುಡಿಸಿದ ಅವರ ಪ್ರತಿಭೆ ವಿಶೇಷವಾಗಿ ಎಲ್ಲರ ಮನ ಸೆಳೆಯಿತು.
ತಮ್ಮ ಹಾಸ್ಯದ ಹಾವ, ಭಾವಗಳ ಪ್ರದರ್ಶನದ ಮೂಲಕ ಕೋಗಳಿ ಕೊಟ್ರೇಶ್, ನೆರೆದಿದ್ದವವರನ್ನು ಬಿದ್ದು ಬಿದ್ದು ನಗುವಂತೆ ಮಾಡಿದರು. ಇಬ್ಬರ ಜೋಡಿ ಸುಮಾರು ಒಂದೂವರೆ ತಾಸು, ನರೆದಿದ್ದ ಸಹಸ್ರಾರು ಪ್ರೇಕ್ಷಕರಿಗೆ ನಗೆಯೂಟ ಬಡಿಸಿದರು.