ಕೊಲ್ಕತ್ತಾ: ಕೊಲ್ಕತ್ತಾದ ಗರಿಯಾ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ 25 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಸಾರ್ಥಕ್ ಸರ್ಕಾರ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಲಿವ್-ಇನ್ ಪಾರ್ಟ್ನರ್ ಸಂಚಲಿಕಾ ಬಸು ಹಾಗೂ ಆಕೆಯ ತಾಯಿ ಮೌಮಿತಾ ಬಸು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಜೋಡಿಗಳ ನಡುವೆ ತೀವ್ರ ಜಗಳ ನಡೆದಿದ್ದು, ಈ ವೇಳೆ ಸಂಚಲಿಕಾ ತನ್ನ ಪ್ರಿಯಕರ ಸಾರ್ಥಕ್ ಹೆಗಲ ಭಾಗಕ್ಕೆ ತೀಕ್ಷ್ಣವಾದ ಆಯುಧದಿಂದ ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವಿನ ಕಚ್ಚಾಟ ಮತ್ತು ಕಿರುಚಾಟವನ್ನು ಕೇಳಿ ಸ್ಥಳೀಯರು ಮನೆಗೆ ಧಾವಿಸಿ, ತೀವ್ರವಾಗಿ ಗಾಯಗೊಂಡಿದ್ದ ಸಾರ್ಥಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಯ ಹಿನ್ನೆಲೆ: ಮೃತ ಸಾರ್ಥಕ್ ಸರ್ಕಾರ್ ಹಾಗೂ ಸಂಚಲಿಕಾ ಬಸು ಗರಿಯಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಸಂಚಲಿಕಾ ಟೆಕ್ನೋ ಇಂಡಿಯಾ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.
ತಾಯಿಯ ಬಂಧನ: ಆರಂಭಿಕ ತನಿಖೆಯ ನಂತರ ಸಂಚಲಿಕಾ ಬಸುಳನ್ನು ವಶಕ್ಕೆ ಪಡೆದ ಪೊಲೀಸರು, ಕೊಲೆಯಲ್ಲಿ ತಾಯಿಗೂ ಭಾಗಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಾಯಿ ಮೌಮಿತಾ ಬಸು ಅವರನ್ನು ಬಂಧಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿ: ಜಗಳಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೇವಲ ವೈಯಕ್ತಿಕ ಗಲಾಟೆಯಿಂದ ಕೊಲೆ ನಡೆದಿದೆಯೇ ಅಥವಾ ಕೊಲೆಯ ಹಿಂದಿನ ಉದ್ದೇಶ ಬೇರೆಯೇ ಇದೆಯೇ ಎಂಬುದರ ಜೊತೆಗೆ, ತಾಯಿಯ ಪಾತ್ರವೇನು ಎಂಬ ಬಗ್ಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲ್ಕತ್ತಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ತೀವ್ರಗೊಳಿಸಿದ್ದಾರೆ.





Leave a comment