ಕೇರಳ: ಕೇರಳದಲ್ಲಿ ನಡೆದ 17 ವರ್ಷದ ಬಾಲಕ ಅಭಿರಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಬೆಚ್ಚಿಬಳಸುವ ಮಾಹಿತಿಗಳು ಹೊರಬಂದಿವೆ. ಕೇವಲ 18 ವರ್ಷ ವಯಸ್ಸಿನ ಅನಂತಾ ಎಂಬ ಯುವತಿಯ ಪ್ರೀತಿ ಹಾಗೂ ಇನ್‌ಸ್ಟಾಗ್ರಾಮ್ ಮೂಲಕ ರೂಪುಗೊಂಡ ಹಲವು ನಂಟೇ ಈ ಭೀಕರ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಪ್ರೀತಿಯ ಹೆಸರಿನಲ್ಲಿ ಬಾಲಕರು ಹಾಗೂ ಯುವಕರನ್ನು ಹತ್ತಿರ ಮಾಡಿಕೊಳ್ಳುತ್ತಿದ್ದ ಈಕೆಯ ಹಾದಿಯೇ ಕೊಲೆಗೆ ಮುನ್ಸೂಚನೆಯಾಗಿದೆ.
ಅಭಿರಾಮ್‌ಗೆ ಈ ಯುವತಿಯೊಂದಿಗೆ ಸಲುಗೆಯಿದ್ದ ಕಾರಣ, ಆಕೆ ಕರೆದ ತಕ್ಷಣ ಆತ ಸ್ಥಳಕ್ಕೆ ಬಂದಿದ್ದನು. ಆದರೆ ಅಲ್ಲಿಗೆ ಹೋದಾಗ ಬೇರೆ ಯುವಕನೂ ಇದ್ದನು. ಅನಂತಾಳ ಅಸಲಿ ಪ್ಲ್ಯಾನ್ ಅಭಿರಾಮ್‌ನ ಕತೆ ಮುಗಿಸುವುದಲ್ಲ, ಬದಲಿಗೆ ಆತನ ಸ್ನೇಹಿತನ ಕತೆ ಮುಗಿಸುವುದಾಗಿತ್ತು.
ಇದಕ್ಕೆ ಮುಖ್ಯ ಕಾರಣ ತ್ರಿಕೋನ ಪ್ರೇಮಕತೆಯ ಹಿನ್ನೆಲೆಯಾಗಿದೆ. ಪ್ರಮುಖ ಆರೋಪಿಯಾಗಿರುವ ಅಪ್ರಾಪ್ತ ಬಾಯ್‌ಫ್ರೆಂಡ್‌ನ ಮಾಜಿ ಪ್ರೇಮಿಗೂ, ಅಭಿರಾಮ್‌ನ ಸ್ನೇಹಿತನಿಗೂ ಪ್ರೀತಿಯ ಸಂಬಂಧವಿತ್ತು. ಇದನ್ನು ಸಹಿಸದ ಮಾಜಿ ಪ್ರೇಮಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದು, ಇದಕ್ಕೆ ಈ ಕ್ರೂರಿ ಹೆಣ್ಣು ಅನಂತಾ ಸಂಪೂರ್ಣ ಸಾಥ್ ನೀಡಿದ್ದಾಳೆ.
ಕೊಲೆಗೆ ಅಸಲಿ ಕಾರಣ: ಅಭಿರಾಮ್ ಬಂದಾಗ ಆತನ ಸ್ನೇಹಿತನನ್ನು ಸ್ಥಳಕ್ಕೆ ಕರೆಸುವಂತೆ ಸೂಚಿಸಲಾಗಿತ್ತು. ಅದಕ್ಕೆ ಅಭಿರಾಮ್ ಒಪ್ಪದಿದ್ದಾಗ ಆತನ ಕುತ್ತಿಗೆಯನ್ನು ಬೆಲ್ಟ್‌ನಿಂದ ಬಿಗಿಗೊಳಿಸಿ ಹತ್ಯೆ ಮಾಡಲಾಗಿದೆ.
ಶವ ವಿಲೇವಾರಿ: ಹತ್ಯೆಯ ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಲಾಗಿದ್ದು, ಉಮರ್ ಮುಫ್ತಾರ್ ಎಂಬಾತ ಶವವನ್ನು ಬಿಸಾಡಲು ಸಹಾಯ ಮಾಡಲು ಬಂದಿರುವುದು ಬೆಳಕಿಗೆ ಬಂದಿದೆ.
ಸಹಚರರ ಬಂಧನ: ಅನಂತಾಳ ನಿರ್ದೇಶನದ ಮೇರೆಗೆ ಕೃತ್ಯ ನಡೆದಿದ್ದು, ಉಮರ್ ಹಾಗೂ ಆತನ ಗರ್ಲ್‌ಫ್ರೆಂಡ್ ಕೈವಾಡವಿರುವ ಹಿನ್ನೆಲೆಯಲ್ಲಿ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಇಡೀ ಪ್ರಕರಣವನ್ನು ಅತ್ಯಂತ ಯೋಜಿತವಾಗಿ ನಡೆಸಲಾಗಿದೆ.
ಅಭಿರಾಮ್ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಈ ಜಾಲದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.





Leave a comment