SUDDIKSHANA KANNADA NEWS/ DAVANAGERE/ DATE:03-12-2024
ದಾವಣಗೆರೆ: ದಾವಣಗೆರೆ ನಗರದ ತರಳಬಾಳು ಬಡಾವಣೆ ನಿವಾಸಿಯಾಗಿದ್ದ ಹಿರಿಯ ಚೇತನ ಹಾಗೂ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ವಿವಿಧ ಪ್ರೌಢಶಾಲೆಗಳಲ್ಲಿ ಮುಖ್ಯ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದ ಕೆ. ಕೆಂಚನಗೌಡರು ನಿಧನ ಹೊಂದಿದ್ದಾರೆ.
ನಿವೃತ್ತಿಯ ನಂತರವೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದರು. ತರಳಬಾಳು ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ವಯೋಸಹಜತೆಯಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಅಪಾರ ಬಂಧು ಬಾಂಧವರು ಹಾಗೂ ಸ್ನೇಹ ಬಳಗವನ್ನು ಅಗಲಿದ್ದಾರೆ.
ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ . ಅವರು ಸಾಹಿತ್ಯ ಪ್ರೇಮ, ಕೊಡುಗೆ ದಾನಿಗಳು, ಉತ್ತಮ ಸಂಘಟಕರಾಗಿದ್ದರು. ತರಳಬಾಳು ಬಡಾವಣೆ ಅಭಿವೃದ್ಧಿಗಾಗಿ ಹಾಗೂ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರು. ಅವರು ಇತ್ತೀಚಿಗಷ್ಟೇ ತಮ್ಮ 90ನೇ ವಯಸ್ಸಿನಲ್ಲಿಯೂ ಉತ್ತರ ಭಾರತದ ಪ್ರವಾಸ ಅದರಲ್ಲೂ ಮುಖ್ಯವಾಗಿ ಕಾಶಿಯ ಶ್ರೀ ವಿಶ್ವನಾಥನ ದರ್ಶನ ,ಅಯೋಧ್ಯೆಯ ಶ್ರೀರಾಮಚಂದ್ರನ ದರ್ಶನ ಪಡೆದ ಹೆಗ್ಗಳಿಕೆ ಅವರದಾಗಿತ್ತು.
ಇಂತಹ ಹಿರಿಯ ಚೇತನರ ಮಾರ್ಗದರ್ಶನವನ್ನು ಕಳೆದುಕೊಂಡು ಒಂದು ರೀತಿಯ ಅನಾಥ ಪ್ರಜ್ಞೆ ಕಾಡುತ್ತಿದೆ. ಕೆ. ಕೆಂಚನಗೌಡ್ರು ನಿಧನಕ್ಕೆ ತರಳಬಾಳು ಬಡಾವಣೆ ಎಲ್ಲಾ ಹಿತೈಷಿ ನಾಗರಿಕರ ಪರವಾಗಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೃತರ ಆತ್ಮಕ್ಕೆ ಚಿರಶಾಂತಿ ಬಯಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತೇವೆ. ಅವರ ಅಗಲಿಕೆಯಿಂದ ಉಂಟಾಗಿರುವ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ಹಾಗೂ ಬಂಧು ಮಿತ್ರರಿಗೆ ಕರುಣಿಸಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ಮತ್ತು ಎಲ್ಲಾ ಪದಾಧಿಕಾರಿಗಳು ಪ್ರಾರ್ಥಿಸಿದ್ದಾರೆ.