ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ದೀರ್ಘಕಾಲದ ಪ್ರೇಮಿ, ಉದ್ಯಮಿ ಆಂಟೋನಿ ತಟ್ಟಿಲ್ ಅವರೊಂದಿಗಿನ ಪ್ರೇಮ ಕಥೆ ಹಾಗೂ ಮದುವೆಗೆ ಮುನ್ನ ಎದುರಾದ ಸವಾಲುಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
ಇಬ್ಬರ ನಡುವಿನ ಅಂತರ್ ಧರ್ಮೀಯ ಸಂಬಂಧವನ್ನು ಒಪ್ಪಿಸಲು ತಮ್ಮ ಕುಟುಂಬವನ್ನು ಮನವೊಲಿಸಲು ಸಾಕಷ್ಟು ಸಮಯ ಹಿಡಿಯಿತು ಎಂದು ಕೀರ್ತಿ ಸುರೇಶ್ ಬಹಿರಂಗಪಡಿಸಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಕೀರ್ತಿ ಸುರೇಶ್, ತಮಗೆ 17 ವರ್ಷ ವಯಸ್ಸಾಗಿದ್ದಾಗ ಅಂದರೆ 12ನೇ ತರಗತಿಯಲ್ಲಿದ್ದಾಗ ಆಂಟೋನಿ ಅವರೊಂದಿಗೆ ಪರಿಚಯವಾಗಿ ಪ್ರೇಮ ಆರಂಭವಾಗಿತ್ತು ಎಂದು ತಿಳಿಸಿದ್ದಾರೆ.
ತಾವು ಚಿತ್ರರಂಗಕ್ಕೆ ಬರುವ ಮುಂಚೆಯಿಂದಲೂ ಆಂಟೋನಿ ಪರಿಚಯವಿದ್ದು, ಇಬ್ಬರೂ ಒಟ್ಟಿಗೆ ಬೆಳೆದಿದ್ದೇವೆ ಎಂದಿದ್ದಾರೆ. ಆಂಟೋನಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಆರಂಭದಲ್ಲಿ ಮನೆಯಲ್ಲಿ ಕೆಲವು ವಿರೋಧಗಳು ವ್ಯಕ್ತವಾಗಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ.
15 ವರ್ಷಗಳ ಸುದೀರ್ಘ ಪ್ರೇಮ: ಸುಮಾರು 15 ವರ್ಷಗಳ ಕಾಲ ರಹಸ್ಯವಾಗಿ ಪ್ರೀತಿಸಿದ ಈ ಜೋಡಿ, ಡಿಸೆಂಬರ್ 2024ರಲ್ಲಿ ಗೋವಾದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು.
ಡೈರಿ ಸಿಕ್ಕಿಬಿದ್ದ ಪ್ರಸಂಗ: ಕಾಲೇಜು ದಿನಗಳಲ್ಲಿ ತಮ್ಮ ಪ್ರೇಮದ ವಿಚಾರ ಬರೆದಿದ್ದ ಡೈರಿಯನ್ನು ತಾಯಿ ಹಾಗೂ ಹಿರಿಯ ನಟಿ ಮೇನಕಾ ಓದಿದ ಬಳಿಕ, ಕೀರ್ತಿ ಸುರೇಶ್ ಡೈರಿ ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದರಂತೆ!
ಚಿತ್ರರಂಗಕ್ಕೂ ಮುಂಚಿನ ಪರಿಚಯ: ತಾನು ನಾಯಕಿಯಾಗಿ ನಟಿಸುವ ಮೊದಲೇ ಆಂಟೋನಿಗೆ ತನ್ನ ಪರಿಚಯವಿತ್ತು ಎಂಬುದು ತಮ್ಮ ಸಂಬಂಧದ ಅತ್ಯಂತ ವಿಶೇಷ ಸಂಗತಿ ಎಂದು ಕೀರ್ತಿ ತಿಳಿಸಿದ್ದಾರೆ.
ಸುಮಾರು ಆರು ವರ್ಷಗಳ ಕಾಲ ಲಾಂಗ್‌ಡಿಸ್ಟೆನ್ಸ್ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ, ದೀರ್ಘಕಾಲದ ಒಡನಾಟದ ಬಳಿಕ ನವೆಂಬರ್ 2024ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿ, ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.





Leave a comment