ಬೆಂಗಳೂರು: ನೀತಿ ಆಯೋಗ 2025 ವರದಿಯನ್ವಯ ಐಟಿ, ಹಣಕಾಸು, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಸೇರಿ ಸೇವಾ ಕ್ಷೇತ್ರಗಳಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೇವಾ ಕ್ಷೇತ್ರಗಳಲ್ಲಿ ರಾಜ್ಯವು ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ಸ್ಟಾರ್ಟ್ ಅಪ್ ನೊಂದಣಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಇದಲ್ಲದೆ, ಕೃಷಿ ಕ್ಷೇತ್ರದಲ್ಲೂ ರಾಜ್ಯವು ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಕಾಫಿ, ರೇಷ್ಮೆ, ತೊಗರಿ, ಅಡಿಕೆ, ರಾಗಿ ಮತ್ತು ಸೂರ್ಯಕಾಂತಿ ಉತ್ಪಾದನೆಯಲ್ಲಿ ನಮ್ಮ ರಾಜ್ಯ ನಂಬರ್ ಒನ್ ಆಗಿದೆ. ಜೊತೆಗೆ ಕಬ್ಬು, ಭತ್ತ, ಈರುಳ್ಳಿ ಯಂತಹ ಮುಂತಾದ ಪ್ರಮುಖ ಬೆಳೆಗಳನ್ನು ಬೆಳೆದು ನಮ್ಮ ರಾಜ್ಯದ ಅನ್ನದಾತರು ದೇಶದ ಆಹಾರ ಭದ್ರತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದ ಬಗ್ಗೆ ಮಾತನಾಡುವಾಗ ನಮಗೆ ಬೆಂಗಳೂರು, ಐಟಿಬಿಟಿ ನೆನಪಾಗುತ್ತದೆ. ದೇಶದಲ್ಲಿ ತಂತ್ರಜ್ಞಾನಾಧಾರಿತ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಸೆಳೆಯುವುದರಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ದೇಶದ ಶೇ.60 ರಷ್ಟು ಬಯೋಟೆಕ್ನಾಲಜಿ ಕಂಪನಿಗಳಿದ್ದು, ದೇಶದ ಬಯೋಟೆಕ್ನಾಲಿಜಿ ಕ್ಷೇತ್ರದ ರಫ್ತಿಗೆ ರಾಜ್ಯವು ಶೇ.50 ರಷ್ಟು ಕೊಡುಗೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಎಂ.ಎಫ್. ನಿಂದ “ಗೋವಿನಿಂದ ಗ್ರಾಹಕರವರೆಗೆ” ಎಂಬ ಶೀರ್ಷಿಕೆಯೊಂದಿಗೆ “ನಂದಿನಿ” ಬ್ರ್ಯಾಂಡ್‌ನಲ್ಲಿ 175 ಕ್ಕೂ ಅಧಿಕ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆ.ಎಂ.ಎಫ್. ನಿಂದ ದಿನಕ್ಕೆ 1 ಕೋಟಿ ಲೀಟರ್‌ಗೂ ಹೆಚ್ಚಿನ ಹಾಲನ್ನು ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದರು.
ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆಂದು ಈ ವರ್ಷ ವಿಶೇಷವಾಗಿ 8000 ಕೋಟಿಗೂ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದೇವೆ [ಇಲಾಖೆಗಳಿಗೆ ರೆಗ್ಯುಲರ್ ಆಗಿ ಕೊಡುವ ಅನುದಾನಗಳ ಜೊತೆಗೆ ಹೆಚ್ಚುವರಿಯಾಗಿ ನೀಡುವ ಅನುದಾನ]. ಈ ವರ್ಷ ಒಟ್ಟಾರೆಯಾಗಿ ಬಂಡವಾಳ ವೆಚ್ಚಗಳಿಗೆಂದು 83,200 ಕೋಟಿ ಅನುದಾನ ಒದಗಿಸಿದ್ದೇವೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ ಶೇ.7 ಕ್ಕಿಂತ ಹೆಚ್ಚಿಗೆ ಇದೆ. ಕರ್ನಾಟಕದಲ್ಲಿ ಶೇ.2.5 ರಷ್ಟಿದೆಯೆಂದು ಸಿಎಂಐಇ ಸಂಸ್ಥೆಯ ಅಂಕಿ ಅಂಶಗಳು ತಿಳಿಸುತ್ತಿವೆ ಎಂದರು.







