Home ದಾವಣಗೆರೆ ಬೆಳಿಗ್ಗೆ 10ಕ್ಕೆ ಹೆಬ್ಬೆರಳು ಒತ್ತದಿದ್ದರೆ ಸಿಎಸ್‌ಗೆ ಮೆಸೇಜ್: ಭ್ರಷ್ಟಾಚಾರ ಹಾಗೂ ಡ್ರಗ್ಸ್ ತಡೆಗೆ ಡಿಕೆಶಿ ಖಡಕ್ ವಾರ್ನಿಂಗ್
ದಾವಣಗೆರೆನವದೆಹಲಿಬೆಂಗಳೂರು

ಬೆಳಿಗ್ಗೆ 10ಕ್ಕೆ ಹೆಬ್ಬೆರಳು ಒತ್ತದಿದ್ದರೆ ಸಿಎಸ್‌ಗೆ ಮೆಸೇಜ್: ಭ್ರಷ್ಟಾಚಾರ ಹಾಗೂ ಡ್ರಗ್ಸ್ ತಡೆಗೆ ಡಿಕೆಶಿ ಖಡಕ್ ವಾರ್ನಿಂಗ್

Share
ಭ್ರಷ್ಟಾಚಾರ
Share

ಬೆಂಗಳೂರು: ಭ್ರಷ್ಟಾಚಾರ ಮುಕ್ತ ಕರ್ನಾಟಕ, ಎಸ್ಐಆರ್ ನಲ್ಲಿ ಮತದಾನದ ಹಕ್ಕು ರಕ್ಷಣೆ, ತಾಲ್ಲೂಕು ಮಟ್ಟದಲ್ಲಿ ರಿಂಗ್ ರಸ್ತೆ ಗ್ರಿಡ್ ನಿರ್ಮಾಣ, ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ, ಯುವ ಯುಗ ಸ್ಥಾಪನೆ, ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹ, ಗ್ರಾಮೀಣ ಶಿಕ್ಷಣಕ್ಕೆ ಸಿಎಸ್ಆರ್ ನೀತಿ ರಚನೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ 7 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಶನಿವಾರ ಮಾಹಿತಿ ನೀಡಿದರು.

“ನಾವೆಲ್ಲರೂ ಒಂದೇ ತಂಡ, ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ ಎಂದು ಅಧಿಕಾರಿಗೆಳಿಗೆ ಮನವಿ ಮಾಡಲಾಗಿದೆ. ಸಮಸ್ಯೆ ಕಾರಣಕ್ಕೆ ಜನ ನಮ್ಮ ಬಳಿಗೆ ಬರುತ್ತಾರೆ. ಸಮಸ್ಯೆ ಇಲ್ಲವಾದರೆ ಯಾರೂ ಡಿಸಿ, ತಾಲ್ಲೂಕು ಕಚೇರಿಗೆ ಬರುವುದಿಲ್ಲ. ಸಮಸ್ಯೆಯೊಂದಿಗೆ ಬಂದ ಜನರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು, ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ. ಎಲ್ಲರೂ 10 ಗಂಟೆಗೆ ಕಚೇರಿಗೆ ಹಾಜರಾಗಬೇಕು, ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳು ಹಾಜರಾದ ಕೂಡಲೆ ಅವರ ಹೆಬ್ಬೆರಳು ಗುರುತು ಮುಖ್ಯ ಕಾರ್ಯದರ್ಶಿಗಳಿಗೆ ಸಂದೇಶ ರವಾನೆಯಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ಪಿಡಿಒಗಳಿಂದ ಯಾವುದೇ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳವರೆಗೂ ಎಲ್ಲರೂ ತಮ್ಮ ಕೇಂದ್ರ ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕು. ಅವರ ವಿಳಾಸ, ದೂರವಾಣಿ ಸಂಖ್ಯೆ ವೆಬ್ ಸೈಟ್ ಗಳಲ್ಲಿ ಲಭ್ಯವಾಗಿರಬೇಕು ಎಂದು ಸೂಚಿಸಿರುವುದಾಗಿ” ತಿಳಿಸಿದರು .

ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ

“ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದೆ. ಯಾರು ಕೂಡ ತಾಲ್ಲೂಕು ಹಾಗೂ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ 10 ರೂಪಾಯಿ ಲಂಚ ನೀಡಬಾರದು. ಇದರ ವಿರುದ್ಧ ದೂರು ನೀಡಲು ಸರ್ಕಾರಿ ಕಚೇರಿಗಳಲ್ಲಿ ದೂರವಾಣಿ ಸಂಖ್ಯೆ ಹಾಕಲಾಗಿರುತ್ತದೆ. ಕೆಲವರು ಸುಳ್ಳು ಪ್ರಕರಣ ದಾಖಲಿಸಿ ಸುಲಿಗೆ ಮಾಡುವವರು ಇದ್ದಾರೆ. ಅದರ ಬಗ್ಗೆಯೂ ನಾವು ಪರಿಶೀಲನೆ ಮಾಡುತ್ತೇವೆ. ನಾನೇ ಆಗಲಿ, ನಮ್ಮ ಸಚಿವರುಗಳೇ ಆಗಲಿ, ಶಾಸಕರುಗಳೇ ಆಗಲಿ ಯಾವುದಾದರೂ ತಪ್ಪನ್ನು ಮಾಡು ಎಂದರೆ ಮಾತು ಕೇಳಬೇಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಯಾರಾದರೂ ಕಾನೂನು ವಿರುದ್ಧ ಕೆಲಸ ಮಾಡಲು ಒತ್ತಡ ಹಾಕಲು ಬಂದರೆ ಕೂಡಲೇ ನನಗೆ ಮಾಹಿತಿ ನೀಡಿ ಎಂದು ತಿಳಿಸಿದ್ದೇನೆ. ನಾನು ಏಕಾಏಕಿ ಎಲ್ಲವನ್ನು ಒಂದೇ ಬಾರಿಗೆ ಬದಲಿಸುತ್ತೇನೆ ಎಂದು ಹೇಳುತ್ತಿಲ್ಲ. ಈ ಪ್ರಯತ್ನದಲ್ಲಿ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದ್ದೇನೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಹ ಕೆಲಸಕ್ಕೆ ಅವಕಾಶ ನೀಡಬೇಡಿ. ಅಧಿಕಾರಿಗಳ ವರ್ಗದಲ್ಲಿ ನಾವು ಸಾಮಾಜಿಕ ನ್ಯಾಯವನ್ನು ಪಾಲಿಸುತ್ತೇವೆ” ಎಂದು ಹೇಳಿದರು.

ತಾಲ್ಲೂಕು ಮಟ್ಟದಲ್ಲಿ ರಿಂಗ್ ರಸ್ತೆ ಗ್ರಿಡ್ ನಿರ್ಮಾಣಕ್ಕೆ ಸೂಚನೆ

“ಸಂಚಾರ ಯೋಜನೆ ಸುಲಭಗೊಳಿಸಲು ಈಗಿನಿಂದಲೇ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು ಯೋಜನೆ ರೂಪಿಸಬೇಕು. ನಾವು ಕೂಡಲೇ ರಸ್ತೆ ಮಾಡದಿದ್ದರೂ ಇದಕ್ಕಾಗಿ ಗ್ರಿಡ್ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರ ಪ್ರದೇಶಗಳಲ್ಲಿ ಇದಕ್ಕೆ ಯೋಜನೆ ರೂಪಿಸಲು ನಿರ್ದೇಶನ ನೀಡಲಾಗಿದೆ” ಎಂದರು.

ಒಂದು ತಿಂಗಳಲ್ಲಿ ಮಕ್ಕಳಿಗೆ ಸಮವಸ್ತು, ಶೂ, ಪಠ್ಯಪುಸ್ತಕ ವಿತರಣೆ

“ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತರುವಂತೆ ಮಾಡಬೇಕು. ಎಷ್ಟು ಶಾಲೆಗಳಲ್ಲಿ ಶೂನ್ಯ ಹಾಜರಾತಿಗಳಿವೆ ಎಂಬ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ವಿದ್ಯಾರ್ಥಿಗಳ ಸಮವಸ್ತ್ರ, ಶೂ, ಪಠ್ಯ ಪುಸ್ತಕ ಮುಂದಿನ ಒಂದು ತಿಂಗಳಲ್ಲಿ ವಿತರಣೆಯಾಗಬೇಕು. ಶೂನ್ಯ ದಾಖಲಾತಿ 964 ಶಾಲೆಗಳಿವೆ. 1-5 ಮಕ್ಕಳ ದಾಖಲಾತಿ ಇರುವ ಶಾಲೆಗಳು 3,542 ಶಾಲೆಗಳು, 6-20 ವಿದ್ಯಾರ್ಥಿಗಳ ದಾಖಲಾತಿ ಇರುವ ಶಾಲೆಗಳ ಪ್ರಮಾಣ 12,696 ಶಾಲೆಗಳಿವೆ. 21-30 ಮಕ್ಕಳ ದಾಖಲಾತಿ ಇರುವ 4,997 ಶಾಲೆಗಳಿರುವ ಮಾಹಿತಿ ನಮ್ಮ ಬಳಿ ಇದೆ” ಎಂದರು.

ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ

“ಮಳೆಗಾಲ ಆರಂಭವಾಗುತ್ತಿದ್ದು, ಬಿತ್ತನೆ ಕಾರ್ಯ ಶುರುವಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆಗೆ ಕ್ರಮವಹಿಸಬೇಕು. ಎಲ್ ನಿನೋ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅಲ್ಪಾವಧಿ ಮಳೆ ಮುನ್ಸೂಚನೆ ಇದೆ. ಇದನ್ನು ನಿಭಾಯಿಸಲು ಕ್ರಮ ವಹಿಸಬೇಕು. ಮಳೆ ಕೊರತೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. 30% ಮಳೆ ಕೊರತೆ ಇದ್ದು, ಮೇವಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಪ್ರತಿ ಹಾಸ್ಟೆಲ್ ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಅಲ್ಲಿನ ಆಹಾರ ಗುಣಮಟ್ಟ ಪರಿಶೀಲಿಸಲು ಸೂಚಿಸಲಾಗಿದೆ” ಎಂದರು.

ನಕಲಿ ಫೈನಾನ್ಸ್ ಸ್ಕೀಂ, ರೌಡಿಗಳು ಹಾಗೂ ಡ್ರಗ್ಸ್ ಜಾಲ ನಿಗ್ರಹಕ್ಕೆ ಕ್ರಮ

“ನಕಲಿ ಫೈನಾನ್ಸ್ ಗಳ ನಿಗ್ರಹಕ್ಕೆ ಸರ್ಕಾರ ಮಸೂದೆ ಜಾರಿಗೆ ತಂದಿದ್ದರೂ ಇಂತಹ ಪ್ರಕರಣ ಬೆಳಕಿಗೆ ಬರುತ್ತಿದ್ದು, ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಗುಪ್ತಚರವನ್ನು ಬಳಸಿ ಇಂತಹ ಸ್ಕೀಂಗಳಿಗೆ ಕಡಿವಾಣ ಹಾಕಬೇಕು ಎಂದು ಸೂಚಿಸಲಾಗಿದೆ. ಗಾಂಜಾ, ಡ್ರಗ್ಸ್ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಡ್ರಗ್ ಪೆಡ್ಲರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ” ಎಂದು ವಿವರಿಸಿದರು.

“ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಪೊಲೀಸರ ತಂಡವನ್ನು ರಚಿಸಿ ರೌಡಿಗಳನ್ನು ನಿಗ್ರಹಿಸಲು ಸೂಚಿಸಲಾಗಿದೆ. ಸೈಬರ್ ಅಪರಾಧ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಜಿಲ್ಲಾ ಮಟ್ಟದಲ್ಲೇ ಜನರ ಸಮಸ್ಯೆ ಬಗೆಹರಿಸಿ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜನಸಂಪರ್ಕ ಸಭೆಯಲ್ಲಿ ಭಾಗವಹಿಸಬೇಕು. ಶಾಸಕರು ಪಂಚಾಯ್ತಿ ಹಾಗೂ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ಮಾಡಬೇಕು. ಅದಕ್ಕೆ ಅಗತ್ಯವಿರುವ ಆರ್ಥಿಕ ವ್ಯವಸ್ಥೆ ಮಾಡಲಾಗುವುದು. ಆಗ ಜನ ಜಿಲ್ಲಾ ಕೇಂದ್ರ ಹಾಗೂ ಬೆಂಗಳೂರಿಗೆ ಬರುವುದು ಕಡಿಮೆಯಾಗುತ್ತದೆ. ಇದರಿಂದ ಈ ಜನಪರ ಸರ್ಕಾರ ಜನರ ಬಳಿಗೆ ಹೋಗಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.

ಎಸ್ಐಆರ್ ನಲ್ಲಿ ಮತದಾನದ ಹಕ್ಕು ರಕ್ಷಣೆಗೆ ಜಾಗೃತಿ

ಎಸ್ಐಆರ್ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿಗೆ ಹೋಗಿ, ಬಿಎಲ್ಒಗಳಿಗೆ ಮಾರ್ಗದರ್ಶನ ನೀಡಿ, ಎಲ್ಲಾ ಪಕ್ಷಗಳ ಬಿಎಲ್ಎಗಳ ಜೊತೆ ಸಂಪರ್ಕ ಇಟ್ಟುಕೊಂಡು ಜನರ ಮತದಾನದ ಹಕ್ಕು ರಕ್ಷಣೆ ಮಾಡಬೇಕು. ಮ್ಯಾಪಿಂಗ್ ಕೇವಲ ಅಧಿಕಾರಿಗಳಿಗೆ ಮಾತ್ರ. ಅದು ನಮಗೆ ಲೆಕ್ಕವಿಲ್ಲ. ನಾನು ಹಾಗೂ ನಮ್ಮ ಸಚಿವರುಗಳೂ ಸೇರಿದಂತೆ ಪ್ರತಿಯೊಬ್ಬ ಮತದಾರರು ತಮ್ಮ ಮತ ಉಳಿಸಿಕೊಳ್ಳಬೇಕಾದರೆ, ಕಡ್ಡಾಯವಾಗಿ ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ತುಂಬಿ ಸಲ್ಲಿಸಬೇಕು. ಆಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ. ಬಿಎಲ್ಎಗಳು ಮನೆ ಬಾಗಿಲಿಗೆ ಬಂದು ಭೇಟಿ ನೀಡುತ್ತಾರೆ. ನೀವು ಭೇಟಿಯಾಗದಿದ್ದರೆ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ. ಯಾರೇ ಆಗಲಿ ತಮ್ಮ ಊರಿನಿಂದ ಹೊರಗೆ ಕೆಲಸ ಮಾಡುತ್ತಿದ್ದರೆ, ಅವರ ದಾಖಲೆಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಸಬೇಕು” ಎಂದು ವಿವರಿಸಿದರು.

“ಯಾರಿಗೆ ವಾಸ ಪ್ರಮಾಣ ಪತ್ರವಿಲ್ಲವೋ ಅವರಿಗೆಲ್ಲಾ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಲಾಗಿದೆ. ಮತದಾನದ ಹಕ್ಕಿಲ್ಲವಾದರೆ, ಸರ್ಕಾರದ ಐದು ಗ್ಯಾರಂಟಿಗಳು, ಸರ್ಕಾರದ ಪಿಂಚಣಿ ಹಾಗೂ ಇತರೆ ಸೌಲಭ್ಯಗಳು ತಲುಪುವುದಿಲ್ಲ. ಹೀಗಾಗಿ ಕಡ್ಡಾಯವಾಗಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಹೋಗಬೇಕು. ಎಸ್ಐಆರ್ ವಿಚಾರದಲ್ಲಿ ಪ್ರತಿ ಪಂಚಾಯ್ತಿ ಹಾಗೂ ಬೂತ್ ಮಟ್ಟದಲ್ಲಿ ಮಾರ್ಗದರ್ಶನ ನೀಡಲು ಸೂಚಿಸಿದ್ದೇನೆ” ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *