ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಕೊನೆಗೂ ಅಂತ್ಯಗೊಂಡಿದ್ದು, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಆದರೆ, ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯುವ ಮುನ್ನವೇ ಸಿದ್ದರಾಮಯ್ಯ ಅವರು ಆಡಳಿತಾತ್ಮಕವಾಗಿ ಅತ್ಯಂತ ಪ್ರಮುಖ ಹಾಗೂ ರಾಜಕೀಯವಾಗಿ ಸಂಚಲನ ಮೂಡಿಸಬಲ್ಲ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಬಹುನಿರೀಕ್ಷಿತ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಜನಗಣತಿ) ವರದಿಯನ್ನು ಸಿದ್ದರಾಮಯ್ಯ ಅವರು ಬುಧವಾರ ಸಂಜೆ ಅಧಿಕೃತವಾಗಿ ಸ್ವೀಕರಿಸಿದ್ದಾರೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಈ ನಡೆ ಹೈಕಮಾಂಡ್ ಹಾಗೂ ಬರುವ ಸರ್ಕಾರಕ್ಕೆ ಹೊಸ ತಲೆನೋವು ತಂದಿಟ್ಟಿದೆ. 2025ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸಲಾದ ಈ ನೂತನ ಸಮೀಕ್ಷಾ ವರದಿಯನ್ನು ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ ಅವರು ಸಿಎಂಗೆ ಹಸ್ತಾಂತರಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಜಾತಿ ಜನಗಣತಿ’ ದೇಶದ ಪ್ರತಿಯೊಬ್ಬರ ಹಕ್ಕನ್ನು ನಿರ್ಧರಿಸುವ ಎಕ್ಸ್-ರೇ ಎಂದು ಬಿಂಬಿಸುತ್ತಾ ಬಂದಿದ್ದಾರೆ. ಆದರೆ ಕರ್ನಾಟಕದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳ ಪ್ರಮುಖ ನಾಯಕರು ಈ ವರದಿಗೆ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಿರುವುದರಿಂದ, ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.
ಒಂದೊಮ್ಮೆ ಹೊಸ ಸರ್ಕಾರ ಈ ವರದಿಯನ್ನು ಜಾರಿಗೆ ತಂದರೆ ಪ್ರಭಾವಿ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ, ಜಾರಿಗೆ ತರಲು ವಿಳಂಬ ಮಾಡಿದರೆ ಸಿದ್ದರಾಮಯ್ಯ ಅವರ ಭದ್ರಕೋಟೆಯಾಗಿರುವ ‘ಅಹಿಂದ’ (AHINDA) ವರ್ಗಗಳ ಆಕ್ರೋಶ ಎದುರಿಸಬೇಕಾಗುತ್ತದೆ. ಜೊತೆಗೆ ರಾಹುಲ್ ಗಾಂಧಿ ಅವರ ರಾಷ್ಟ್ರೀಯ ಮಟ್ಟದ ಸಾಮಾಜಿಕ ನ್ಯಾಯದ ಹೋರಾಟದ ವಿಶ್ವಾಸಾರ್ಹತೆಗೂ ಧಕ್ಕೆಯಾಗಲಿದೆ. ಒಟ್ಟಿನಲ್ಲಿ, ರಾಜೀನಾಮೆ ನೀಡಿದರೂ ರಾಜ್ಯ ರಾಜಕಾರಣದಲ್ಲಿ ತಮ್ಮ ಪ್ರಭಾವ ಮತ್ತು ‘ಅಹಿಂದ’ ನಾಯಕತ್ವ ಕಳೆದುಕೊಳ್ಳದಂತೆ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ
- AHINDA Politics
- DK Shivakumar CM
- Karnataka Caste Census Report
- Karnataka Leadership Change
- Madhududan Nayak Commission
- Rahul Gandhi
- Siddaramaiah Resignation
- Socio Economic Survey Karnataka 2026
- ಅಹಿಂದ ರಾಜಕಾರಣ
- ಕರ್ನಾಟಕ ಹೊಸ ಮುಖ್ಯಮಂತ್ರಿ
- ಜಾತಿ ಜನಗಣತಿ ಕರ್ನಾಟಕ
- ಡಿ ಕೆ ಶಿವಕುಮಾರ್ ಸಿಎಂ
- ಮಧುಸೂದನ್ ನಾಯಕ್ ಆಯೋಗ
- ರಾಹುಲ್ ಗಾಂಧಿ
- ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025
- ಸಿದ್ದರಾಮಯ್ಯ ರಾಜೀನಾಮೆ





Leave a comment