Home ಕ್ರೈಂ ನ್ಯೂಸ್ ಇಟಲಿಯಿಂದ ಬಂದಿದ್ದ ಯುವತಿ ಚಲಾಯಿಸುತ್ತಿದ್ದ ಥಾರ್ ಕಾರು ಡಿಕ್ಕಿಯಾಗಿ ಎಲ್‌ಐಸಿ ಏಜೆಂಟ್ ಸಾವು: ಆರೋಪಿ ಯುವತಿಗೆ ಅದೇ ದಿನ ಜಾಮೀನು ನೀಡಿ ಆಕ್ರೋಶಕ್ಕೀಡಾದ ಪೊಲೀಸರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಇಟಲಿಯಿಂದ ಬಂದಿದ್ದ ಯುವತಿ ಚಲಾಯಿಸುತ್ತಿದ್ದ ಥಾರ್ ಕಾರು ಡಿಕ್ಕಿಯಾಗಿ ಎಲ್‌ಐಸಿ ಏಜೆಂಟ್ ಸಾವು: ಆರೋಪಿ ಯುವತಿಗೆ ಅದೇ ದಿನ ಜಾಮೀನು ನೀಡಿ ಆಕ್ರೋಶಕ್ಕೀಡಾದ ಪೊಲೀಸರು!

Share
ಯುವತಿ
Share

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಮುನ್ನಾ ದಿನವಾದ ನವೆಂಬರ್ 7ರಂದು, ಲರ್ನಿಂಗ್ ಲೈಸೆನ್ಸ್ ಪಡೆದು ಅಜಾಗರೂಕತೆಯಿಂದ ಮಹೀಂದ್ರಾ ಥಾರ್ ಕಾರು ಚಲಾಯಿಸುತ್ತಿದ್ದ 24 ವರ್ಷದ ಯುವತಿಯೊಬ್ಬಳು ಸ್ಕೂಟರ್‌ಗೆ ಗುದ್ದಿದ ಪರಿಣಾಮ, 55 ವರ್ಷದ ಎಲ್‌ಐಸಿ ಏಜೆಂಟ್ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತಳಾಗಿದ್ದ ಆರೋಪಿ ಯುವತಿಗೆ ದೀಪಾವಳಿ ಹಬ್ಬದ ದಿನವೇ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ನೀಡಿ ಬಿಡುಗಡೆ ಮಾಡಿರುವುದು ಮೃತನ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮೃತರನ್ನು ಸಂತೋಷ್ ಸಿಂಗ್ ಚೌಹಾಣ್ ಎಂದು ಗುರುತಿಸಲಾಗಿದೆ. ತಮ್ಮ ಪತ್ನಿಗೆ ಸೀರೆ ಖರೀದಿಸಿ ಸ್ಕೂಟರ್‌ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ, ಇಟಲಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಹಬ್ಬಕ್ಕೆಂದು ಊರಿಗೆ ಬಂದಿದ್ದ ಗೀತಾ ಸಚನ್ ಎಂಬ ಯುವತಿ ಚಲಾಯಿಸುತ್ತಿದ್ದ ಅತಿವೇಗದ ಥಾರ್ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸಂತೋಷ್ ಹಾಗೂ ಅವರ ಸ್ಕೂಟರ್ ಅನ್ನು ಕಾರು ಕೆಲವು ಮೀಟರ್‌ಗಳವರೆಗೆ ಎಳೆದುಕೊಂಡು ಹೋಗಿದ್ದು, ಬಳಿಕ ರಸ್ತೆ ಬದಿಯ ಮನೆ ಗೋಡೆ ಮತ್ತು ಉದ್ಯಾನವನಕ್ಕೆ ನುಗ್ಗಿ ನಿಂತಿದೆ. ಅಪಘಾತದ ಬಳಿಕ ಕಾರಿನಲ್ಲಿದ್ದವರು ವಾಹನವನ್ನು ಬಿಟ್ಟು ಬೇರೆ ಕಾರಿನಲ್ಲಿ ಪರಾರಿಯಾಗಿದ್ದರು. ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರ ತೀವ್ರ ಪ್ರತಿಭಟನೆಯ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಠಾಣೆಯಲ್ಲಿಯೇ ಜಾಮೀನು: ಅಪಘಾತವೆಸಗಿ ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪಿ ಗೀತಾ ಸಚನ್‌ಗೆ ದೀಪಾವಳಿ ದಿನದಂದೇ ಪೊಲೀಸ್ ಠಾಣೆಯಿಂದಲೇ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದ್ದು, ಕಾನೂನು ವ್ಯವಸ್ಥೆ ವಿರುದ್ಧ ಕುಟುಂಬಸ್ಥರು ಕಿಡಿಕಾರಿದ್ದಾರೆ.

ಕುಟುಂಬದವರ ಆಕ್ರೋಶ: “ನಮ್ಮ ಮನೆಯಲ್ಲಿ ಕತ್ತಲು ಕವಿದಿದ್ದರೆ, ನನ್ನ ತಂದೆಯ ಸಾವಿಗೆ ಕಾರಣವಾದವಳು ಹಬ್ಬ ಆಚರಿಸುತ್ತಿದ್ದಾಳೆ. ಇದು ಯಾವ ನ್ಯಾಯ?” ಎಂದು ಮೃತನ ಮಗ ರಾಹುಲ್ ಚೌಹಾಣ್ ಕಣ್ಣೀರಿಟ್ಟಿದ್ದಾರೆ.

ಚಾಲನಾ ಪರವಾನಗಿ ಬಗ್ಗೆ ಅನುಮಾನ: ಆರೋಪಿ ಯುವತಿಗೆ ಸರಿಯಾಗಿ ವಾಹನ ಚಲಾಯಿಸಲು ಬರುವುದಿಲ್ಲವೇ ಅಥವಾ ಆಕೆಗೆ ಚಾಲನಾ ಪರವಾನಗಿ (Driving Licence) ಇತ್ತೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ಆಕೆಯ ತಂದೆಯ ಮೇಲೂ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿರುವುದರಿಂದ ಕಾನೂನು ಪ್ರಕ್ರಿಯೆಯಂತೆ ಜಾಮೀನು ನೀಡಲಾಗಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಆದರೆ ಪೊಲೀಸರ ಈ ಧೋರಣೆ ವಿರುದ್ಧ ಸಾರ್ವಜನಿಕ ವಲಯದಲ್ಲೂ ತೀವ್ರ ಟೀಕೆ ವ್ಯಕ್ತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles