SUDDIKSHANA KANNADA NEWS/ DAVANAGERE/ DATE:01-11-2023
ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ. ಕರ್ನಾಟಕದ ಮನೆ ಮನಗಳಲ್ಲಿ ಕನ್ನಡದ ಕಹಳೆ ಮೊಳಗುತ್ತದೆ. ರಾಜಧಾನಿ ಬೆಂಗಳೂರಿನಲ್ಲಂತೂ ತಿಂಗಳು ಪೂರ್ತಿ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯುತ್ತಲೇ ಇರುತ್ತದೆ.
ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ತನುವು ಕನ್ನಡ.. ಮನವೂ ಕನ್ನಡ ಎಂಬ ವಾತಾವರಣ ಮನೆ ಮಾಡಿರುತ್ತದೆ. ನವೆಂಬರ್ ಒಂದು ನಮ್ಮ ಭವ್ಯ ಕರ್ನಾಟಕ ರಚನೆಯಾಗಿದ್ದು. 1956 ನವೆಂಬರ್ 1 ಮೈಸೂರು ರಾಜ್ಯ ರೂಪುಗೊಂಡ ದಿನ.. ರಾಜ್ಯಗಳ ಪುನರ್ ವಿಂಗಡನೆ ಕಾಯಿದೆಯಡಿ ಜನ್ಮ ತಾಳಿದ ನವ ರಾಜ್ಯ ಕೇವಲ ಕನ್ನಡ ಭಾಷಾ ಪ್ರದೇಶಗಳ ಏಕೀಕರಣ ಆದದ್ದು ಮಾತ್ರವಲ್ಲ. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಮನಗಳನ್ನು ಒಗ್ಗಟ್ಟಾಗಿಸಿದ ದಿನ ನವೆಂಬರ್ ಒಂದು.
ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ ಎಂದರೆ ಇದಕ್ಕೆ ಕಾರಣ “ಕರ್ನಾಟಕದ ಏಕೀಕರಣ”. ಈಗಿನ ಕರ್ನಾಟಕ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿತ್ತು. ವಿವಿಧ ಪ್ರಾಂತ್ಯಗಳಿಗೆ ಸೇರಿದ್ದ ಕನ್ನಡಿಗರನ್ನು ಒಂದುಗೂಡಿಸಬೇಕು ಅನ್ನೋ ಕಲ್ಪನೆಯೇ ಒಂದು ಅದ್ಭುತ.
ಕನ್ನಡದ ಏಕೀಕರಣದ “ಪಿತಾಮಹ ಆಲೂರು ವೆಂಕಟರಾಯರು ” ಚಳುವಳಿಯನ್ನು ಆರಂಭಿಸಲು ಶ್ರಮಿಸಿದರು. ಇವರೊಂದಿಗೆ ಹಲವಾರು ಮಹನೀಯರು ಜೊತೆಗೂಡಿದರು. 19ನೇ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956ರ ರಾಜ್ಯ ಪುನರ್ ವಿಂಗಡಣೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ಏಕೀಕರಣದ ಕನಸನ್ನು ಬಿತ್ತಿ ಕನ್ನಡವನ್ನು ಸಮರ್ಥವಾಗಿ ಕಟ್ಟುವಲ್ಲಿ ಹಲವು ಮುಖಂಡರಿದ್ದರು. ಇವರು ಹಾಕಿದ ಬೀಜವೇ ಮೊಳಕೆಯೊಡೆದು ಕರ್ನಾಟಕ ರಾಜ್ಯ ಉದಯವಾಯಿತು. ರಾ.ಹ.ದೇಶಪಾಂಡೆ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಹುಟ್ಟುಹಾಕಲಾಯಿತು. ಇದು ಕನ್ನಡಕ್ಕಿದ್ದ ಕೆಟ್ಟ ಸ್ಥಿತಿಯನ್ನ ದೂರ ಮಾಡಲು ಸಾಕಷ್ಟು ಶ್ರಮಿಸಿತು. ಅದಾದ ಬಳಿಕ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಏಕೀಕರಣದ ಹೋರಾಟಕ್ಕೆ ದೊಡ್ಡ ಸ್ಫೂರ್ತಿಯನ್ನೇ ನೀಡಿತು. ಇನ್ನು, ಕರ್ನಾಟಕ ಕುಲ ಪುರೋಹಿತರೆಂದೇ ಕರೆಯಲ್ಪಡುವ ಆಲೂರು ವೆಂಕಟರಾಯರ ಹೋರಾಟ ನಾವು ಮರೆಯಲು ಆಗುವುದೇ ಇಲ್ಲ.
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಮಹಾಧಿವೇಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆಯಿತು. ಆಗಲೇ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಪರಿಷತ್ ಹುಟ್ಟಿಕೊಂಡಿತು. ಈ ಪರಿಷತ್ ಏಕೀಕರಣಕ್ಕೆ ಹೊಸ ತಿರುವನ್ನ ನೀಡಿತು.
1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಆದರೆ, ಕಾಸರಗೋಡು, ತಾಳವಾಡಿ, ಮಡಾಕಶಿರಾ, ಜತ್ತ್, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಇವೆಲ್ಲವೂ ಏಕೀಕೃತ ರಾಜ್ಯದಿಂದ ಹೊರಗುಳಿದ ಕಾರಣ ತಿಳಿಯಲೇ ಇಲ್ಲ. ಈಗಲೂ ಅಲ್ಲಿನ ಜನರಿಗೆ ಕರ್ನಾಟಕಕ್ಕೆ ಸೇರಬೇಕೆಂಬ ಆಸೆಯಂತೂ ಇದ್ದೇ ಇದೆ.
ಕನ್ನಡ ರಾಜ್ಯೋತ್ಸವ – ಸುವರ್ಣ ಮಹೋತ್ಸವದ ಶುಭಾಶಯಗಳು.
ಡಾ. ಆರ್ ಶೈಲಜ ಶರ್ಮ, ಲೇಖಕಿ ಬೆಂಗಳೂರು