SUDDIKSHANA KANNADA NEWS/ DAVANAGERE/ DATE:25-03-2025
ದಾವಣಗೆರೆ: ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಕನ್ನಡ ಶಾಲೆಗಳು ಜೀವಂತಿಕೆಯಿಂದ ಇರಬೇಕು. ಕನ್ನಡ ಶಾಲೆಗಳು ಸತ್ತು ಹೋಗುತ್ತಿರುವುದರಿಂದ ಭಾಷೆಯೂ ಸತ್ತು ಹೋಗುತ್ತಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ನ್ಯಾಮತಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಏರ್ಪಡಿಸಿದ್ದ ಶಾಶ್ವತ ಕನ್ನಡ ಧ್ವಜ ಸ್ತಂಭ ಉದ್ಘಾಟನೆ, ಕನ್ನಡ ನಾಡು ರಕ್ಷಣಾ ವೇದಿಕೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಪರಿಸ್ಥಿತಿ ತುಂಬಾನೇ ಕೆಟ್ಟದ್ದಾಗಿದೆ. ಇಲ್ಲಿ ಓದುವ ಹೆಚ್ಚಿನ ಮಕ್ಕಳು ಕಡುಬಡವರು ಹಾಗೂ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರೇ. ಹಣ ಇಲ್ಲವೆಂಬ ಕಾರಣಕ್ಕೆ ಎಷ್ಟೋ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಇದು ಆಗಬಾರದು. ಉನ್ನತ ಶಿಕ್ಷಣ ಕೊಡಿಸಿದರೆ ಮಕ್ಕಳ ಭವಿಷ್ಯವೂ ಉಜ್ವಲ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಳ್ಳಿಗಳಲ್ಲಿಯೂ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು ಎಂಬುದು ನನ್ನ ಉದ್ದೇಶ ಮತ್ತು ಗುರಿ. ಇದಕ್ಕಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದೇನೆ. ಬಡವರ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಬೇಕು.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವನ್ನು ನಿಯಂತ್ರಿಸುವಂತ ಅಧಿಕಾರಿಗಳಾಗಬೇಕು. ಬಡವರ ಮಕ್ಕಳು ಹಣ ಎಲ್ಲ ಎಂಬ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು. ಪೋಷಕರು ಆರ್ಥಿಕ ಪರಿಸ್ಥಿತಿಯಿಂದ ಶಾಲೆ ಬಿಡಿಸಿ ಕೆಲಸಕ್ಕೆ
ಸೇರಿಸಬಾರದು ಎಂದು ಮನವಿ ಮಾಡಿದರು.
ಪೌರಕಾರ್ಮಿಕರು ನಗರದ ಆತ್ಮಸಾಕ್ಷಿಗಳಿದ್ದಂತೆ. ಕೇವಲ ಸ್ವಚ್ಛತಾ ಕಾರ್ಯ ಮಾತ್ರ ಮಾಡುವುದಿಲ್ಲ. ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಾರೆ. ಅವರು ಒಂದು ವಾರ ಇಲ್ಲವೆಂದರೆ ನಗರವೆಲ್ಲಾ ಗಬ್ಬೆದ್ದು ಹೋಗುತ್ತದೆ. ಬೆಂಗಳೂರಿನಂಥ ಮಹಾನಗರಗಳಲ್ಲಿ ಪೌರ ಕಾರ್ಮಿಕರು ಇಲ್ಲವೆಂದರೆ ಊಹಿಸಿಕೊಳ್ಳಲು ಆಗದು. ಅಲ್ಲಿ ವಾಸ ಮಾಡುವವರು ಬೆಂಗಳೂರು ಖಾಲಿ ಮಾಡಬೇಕಾಗುತ್ತದೆ. ಯಾರಿಗಾದರೂ ಹೆಚ್ಚಿನ ಗೌರವ ನೀಡಬೇಕೆಂದರೆ ಅದು ಪೌರಕಾರ್ಮಿಕರಿಗೆ ಎಂದು ಹೇಳಿದರು.
ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಎಂಟು ಕ್ಷೇತ್ರಗಳಲ್ಲಿ 2 ಸಾವಿರ ಹಳ್ಳಿಗಳನ್ನು ಸಂಚರಿಸಲು ಆಗಲಿಲ್ಲ. ಆದ್ರೆ, ಬಹುತೇಕ ಮಂದಿಯನ್ನು ತಲುಪುವ ಕೆಲಸ ಮಾಡಿದ್ದೆ. ಸುರಹೊನ್ನೆಯಲ್ಲಿ ಎರಡರಿಂದ ಮೂರು ರ್ಯಾಲಿ ಮಾಡಿದ್ದೆವು. ಹೆಚ್ಚಿನ ಪರಿಚಯ ಮುಂದಿನ ದಿನಗಳಲ್ಲಿ ಆಗುತ್ತದೆ. ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ ಸೈಟ್ಸ್ ಐಎಎಸ್ ಸಂಸ್ಥೆಯು ದೇಶದಲ್ಲಿಯೇ ಮೂರನೇ ಐಎಎಸ್ ಕೋಚಿಂಗ್ ಸೆಂಟರ್ ಎಂಬ ಹೆಗ್ಗಳಿಕೆ ಹೊಂದಿದೆ. ಪೌರಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ಅವರಿಗೂ ಒಳ್ಳೆಯ ಶಿಕ್ಷಣ ಸಿಗಬೇಕು. ಸ್ವಚ್ಛತಾ ಕೆಲಸ ಮಾಡುವುದು ತಪ್ಪಲ್ಲ. ಇದು ನಿಮ್ಮ ಬದುಕಿಗೆ ಕೊನೆಯಾಗಬೇಕು. ಯಾವ ಕೆಲಸವೂ ತಪ್ಪಲ್ಲ. ನಿಮ್ಮ ಮಕ್ಕಳು ಜಿಲ್ಲಾಡಳಿತ, ತಾಲೂಕು ಆಡಳಿತದ ಚುಕ್ಕಾಣಿ ಹಿಡಿಯುವಂತಾಗಬೇಕು. ಎಷ್ಟೇ ಕಷ್ಟ ಎದುರಾದರೂ ವಿದ್ಯಾಭ್ಯಾಸ ಕೊಡಿಸಿ. ನಮ್ಮ ಸಂಸ್ಥೆಯಿಂದ ಕಡುಬಡವರು, ಪೌರ ಕಾರ್ಮಿಕರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡಲಾಗುವುದು. ನೀವು ಧೈರ್ಯ ಮಾಡಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಈ ನಾಡು ಕಂಡ ಅದ್ಭುತ ವ್ಯಕ್ತಿತ್ವದ ಮೇರು ನಟ ದಿವಂಗತ ಪುನೀತ್ ರಾಜಕುಮಾರ್ ಸವಿನೆನಪಿನಲ್ಲಿ ಇಂಥ ಕಾರ್ಯಕ್ರಮ ಆಯೋಜನೆ ಮಾಡಿರುವುದು ಖುಷಿಯ ವಿಚಾರ. ಇಂಥ ಜನಪಯೋಗಿ ಕಾರ್ಯಗಳಿಗೆ ಕೈಯಲ್ಲಾದಷ್ಟು ಸಹಾಯ ಮಾಡುತ್ತೇನೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ಭರವಸೆ ನೀಡಿದರು.
ರಾಂಪುರದ ಸದ್ಗುರು ಶಿವಕುಮಾರ ಶಿವಾಚಾರ್ಯ ಹಾಲಸ್ವಾಮೀಜಿ, ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕನ್ನಡ ನಾಡು ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರಸನ್ನ ಗೌಡ್ರು, ಕೆ. ಬಿ. ಚೆನ್ನಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಹಾಲಾರಾಧ್ಯ, ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜಪ್ಪ, ತಾಲೂಕು ಅಧ್ಯಕ್ಷ ಶಂಕರ್ ನಾಯಕ್, ಗೌರವಾಧ್ಯಕ್ಷ ಕತ್ತಿಗೆ ನಾಗರಾಜ್, ಚೇತನ್ ಕುಮಾರ್, ಜಗದೀಶ್, ಗಣೇಶ್, ವಿನಯ್ ಗೌಡ, ರವಿ, ವನಿತಾ, ಉಷಾ, ಮಂಜುಳಾ, ಅಂಬಿಕಾ, ಲಕ್ಷ್ಮೀ ಮತ್ತಿತರರು ಹಾಜರಿದ್ದರು.