ದಾವಣಗೆರೆ: ಭದ್ರಾ ಡ್ಯಾಂನಲ್ಲಿ ಪ್ರಸ್ತುತ 173 ಅಡಿ ನೀರು ಲಭ್ಯವಿದ್ದು, ಮುಂಬರುವ ಬೇಸಿಗೆ ಹಂಗಾಮಿನಲ್ಲಿ ರೈತರಿಗೆ ಕಾಲುವೆಗಳ ಮೂಲಕ ಕೃಷಿಗೆ ನೀರು ಹರಿಸಲು ಕೂಡಲೇ ನೀರಾವರಿ ಸಲಹಾ ಸಮಿತಿ ತುರ್ತು ಸಭೆ ಕರೆಯಬೇಕು. ಅಲ್ಲದೆ, ನೀರು ಬಿಡುವ ವೇಳಾಪಟ್ಟಿಯನ್ನು ಮುಂಚಿತವಾಗಿ ಪ್ರಕಟಿಸಬೇಕು ಹಾಗೂ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಲಾಗಿದೆ.
ಕಳೆದ ವಾರ ಸುರಿದ ಸ್ವಾತಿ ಮಳೆಯಿಂದ ರೈತರಲ್ಲಿ ಕೊಂಚ ಸಮಾಧಾನವಿದ್ದರೂ, ಬೇಸಿಗೆ ಬೆಳೆಗೆ ನೀರು ಸಿಗುವ ಕುರಿತು ಸ್ಪಷ್ಟನೆ ಸಿಗಬೇಕಿದೆ. ಜನವರಿ ೧ರಿಂದ ಸತತ ೧೨೦ ದಿನಗಳ ಕಾಲ ನಾಲೆಗಳಿಗೆ ನೀರು ಹರಿಸುವ ತೀರ್ಮಾನವನ್ನು ಈಗಲೇ ಕೈಗೊಂಡರೆ ರೈತರು ಸಸಿ ಮಡಿಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗಲಿದೆ ಮತ್ತು ಕೊನೆ ಭಾಗದ ಜಮೀನುಗಳಿಗೂ ನೀರು ತಲುಪಿಸಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದರೊಂದಿಗೆ, ಕಾಲುವೆಗಳ ಹೂಳು ತೆಗೆಯುವುದು, ಸೂಪರ್ ಪ್ಯಾಸೇಜ್ ದುರಸ್ಥಿಪಡಿಸುವುದು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆಯಾದಾಗ ಒಳಹರಿವಿನ ಪ್ರಮಾಣದ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿ ಪ್ರತಿದಿನದ ನೀರಿನ ಸಂಗ್ರಹದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ರೈತರು ಆಗ್ರಹಿಸಿದ್ದಾರೆ.
ಜನವರಿಯಿಂದ ನೀರು ಹರಿಸಿ: ಬೇಸಿಗೆ ಹಂಗಾಮಿಗೆ ಜನವರಿ 1ರಿಂದ ಸತತ 120 ದಿನಗಳ ಕಾಲ ನಾಲೆಗೆ ನೀರು ಬಿಡಲು ಈಗಲೇ ಐ.ಸಿ.ಸಿ ಸಭೆ ಕರೆದು ವೇಳಾಪಟ್ಟಿ ಪ್ರಕಟಿಸಬೇಕು.
ಕಾಲುವೆಗಳ ದುರಸ್ತಿ ಕಾಮಗಾರಿ: ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಮತ್ತು ಹೂಳು ತೆಗೆದು, ಹಾನಿಯಾಗಿರುವ ಸೂಪರ್ ಪ್ಯಾಸೇಜ್ ಹಾಗೂ ತೂಬುಗಳನ್ನು ಕೂಡಲೇ ದುರಸ್ತಿಗೊಳಿಸಬೇಕು.
ನೀರಿನ ಸಂಗ್ರಹದ ಸ್ಪಷ್ಟನೆ: ಭದ್ರಾ ಜಲಾಶಯದ ಒಳಹರಿವು ಮತ್ತು ಪ್ರಸ್ತುತ ನೀರಿನ ಸಂಗ್ರಹದ ಕುರಿತು ಜಿಲ್ಲಾಡಳಿತದಿಂದ ಸ್ಪಷ್ಟನೆ ನೀಡಿ, ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಒದಗಿಸಬೇಕು.





Leave a comment