SUDDIKSHANA KANNADA NEWS/ KALABURAGI/ DATE:09-09-2023
ಕಲಬುರಗಿ (Kalaburagi): ಇಲ್ಲಿದ್ದರೂ ಸಹನೆ ಇಲ್ಲ. ಇಲ್ಲಿಂದನೂ ಕಳುಹಿಸಿಬಿಟ್ರಿ. ಈಗ ದೆಹಲಿಗೆ ಹೋಗಿ ಕುಳಿತಿದ್ದೇನೆ. ಅಲ್ಲಿಂದ ಇಲ್ಲಿಂದ ತರಬೇಕು ಅಂತೀರಿ. ರಾಜ್ಯದವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಒಗಟಿನ ಮಾತು ಹೇಳುವ ಮೂಲಕ ಕುತೂಹಲ ಮೂಡಿಸಿದರು. ಮಾತ್ರವಲ್ಲ, ಲೋಕಸಭೆಗೆ ಕಲಬುರಗಿಯಿಂದ ಸ್ಪರ್ಧಿಸದೇ ಬೇರೆ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಾರೋ ಎಂಬ ಅನುಮಾನ ಮೂಡುವಂತೆ ಮಾತು ಆಡಿದ್ದಾರೆ.
ಈ ಸುದ್ದಿಯನ್ನೂ ಓದಿ:
Kalaburagi: ಕನ್ಯೆ ನೋಡಲು ಬಂದು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ: ಉಂಡು ಹೋದ ಕೊಂಡು ಹೋದವನ ವಿರುದ್ಧ ಯುವತಿ ದೂರು
ಕಲಬುರಗಿಯಲ್ಲಿ ಮಾಧ್ಯಮದರ ಜೊತೆ ಮಾತನಾಡಿದ ಅವರು, ಕಲಬುರಗಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಖಚಿತವಾಗಿ ಹೇಳಲಿಲ್ಲ. ಮಾತಿನಲ್ಲಿ ನಿಲ್ಲದಿರುವ ಹಾಗೂ ಕ್ಷೇತ್ರದ ಜನರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸುವಂತಿತ್ತು.
ಜಿ -20 ಸಭೆ ಸಾಮರಸ್ಯದ ಸಭೆಗೆ ನನ್ನನ್ನು ಆಹ್ವಾನಿಸಿಲ್ಲ. ಆಹ್ವಾನ ಇಲ್ಲದೇ ನಾನು ಹೇಗೆ ಹೋಗಲಿ. ದೇಶದಲ್ಲಿ ಪ್ರಪಂಚದಲ್ಲಿ ಗದ್ದಲ ಇಲ್ಲದೇ ಸಾಮರಸ್ಯದಿಂದ ಇರೋದು ಒಳ್ಳೆಯದು ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಇಬ್ಬರು ಒಂದಾಗಿದ್ದಾರೆ ಅಂತಾ ಪೇಪರ್ ನಲ್ಲಿ ನೋಡಿದ್ದೇನೆ. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ. ಅವರಿಬ್ಬರೂ ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟು ಸೀಟ್ ಅವರು ಕೇಳ್ತಾರೆ, ಇವರು ಎಷ್ಟು ಕೊಡ್ತಾರೆ ಅನ್ನೋ ಬಗ್ಗೆ ಇನ್ನೂ ಖಚಿತತೆ ಇಲ್ಲ ಎಂದು ತಿಳಿಸಿದರು.
ಜೆಡಿಎಸ್ ತನ್ನ ಸಿದ್ಧಾಂತ ಬದಲಾವಣೆ ಮಾಡಿಕೊಂಡಿರುವ ಕುರಿತಂತೆ ನಾನು ಪ್ರತಿಕ್ರಿಯೆ ನೀಡಲ್ಲ. ಜೆಡಿಎಸ್ ಮೊದಲಿನಿಂದಲು ಜಾತ್ಯಾತೀತ ಎಂದು ಹೇಳುತಿತ್ತು. ಈಗ ಕೋಮುವಾದಿ ಬಿಜೆಪಿ ಜೊತೆ ಕೈ ಜೋಡಿಸಲು ಇದು ಅಡ್ಡಿಯಾಗುವುದಿಲ್ಲವಾ ಎಂದು ಪ್ರಶ್ನಿಸಿದರು.
ನಮ್ಮನ್ನ ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ. ದೇಶದಲ್ಲಿ 28 ಪಾರ್ಟಿ ಒಂದಾಗಿ ಚುನಾವಣೆ ಎದುರಿಸೋದಕ್ಕೆ ಮುಂದಾಗಿದ್ದೇವೆ. ಶೇಕಡಾ 60ರಷ್ಟು ಮತಗಳನ್ನು ಪಡೆಯಬೇಕು ಎಂಬ ಲೆಕ್ಕಾಚಾರ ಹಾಕುತ್ತಿದ್ದೇವೆ. ಇಂಡಿಯಾದ ನಾಲ್ಕನೇ ಸಭೆ ಕೂಡ ಮಾಡುತ್ತಿದ್ದೇವೆ. ನಾವೆಲ್ಲ ಒಂದಾಗಿ ಹೋರಾಟ ಮಾಡಲು ಮುಂದಾಗಿದ್ದೇವೆ. ನಾನು ರಾಜಕೀಯದಲ್ಲಿ ಧರ್ಮ ತರೋದಿಲ್ಲ. ರಾಜಕೀಯ ಹಾದಿಯಲ್ಲಿ ಒಂದಾಗಿ ಹೋರಾಡುತ್ತೇವೆ ಅಷ್ಟೇ. ಧರ್ಮದ ವಿಚಾರ ಬಂದಾಗ ಡಿಬೇಟ್ ಮಾಡೋಣ. ಯಾವುದು ಸರಿ ಯಾವುದು ತಪ್ಪು ಎಂದು. ಬಸವಣ್ಣ ಸರಿನೋ ಅಂಬೇಡ್ಕರ್ ಸರಿನೋ ಅನ್ನೋದ್ರ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.
ರಿಪಬ್ಲಿಕ್ ಭಾರತ್ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ ಅವರು, ಭಾರತ್ ಏನು ಸಂವಿಧಾನದಲ್ಲಿ ಇಲ್ಲವಾ. ಇಂಡಿಯಾ ಅಂದ್ರೆ ಭಾರತ್ ಅದು ಸಂವಿಧಾನದಲ್ಲೇ ಇದೆ. ಇದು ಯಾರು ಬೇಡ ಅಂದ್ರೋ ಗೊತ್ತಿಲ್ಲ. ಎಲ್ಲರೂ ಭಾರತ್ ಮಾತಾ ಕಿ ಜೈ ಅಂತಾರೆ. ಹಾಗಾದ್ರೆ ಸ್ಟಾರ್ಟಪ್ ಇಂಡಿಯಾ, ಡಿಜಿಟಲ್ ಇಂಡಿಯಾ ಅಂತಾ ಯಾಕೆ ಹೆಸರು ಇಟ್ಟಿದ್ದಾರೆ ಗೊತ್ತಿಲ್ಲ. ಭಾರತ್ ಜೋಡೊ ಅಂತಾ ನಾವೇ ಪ್ರಚಾರ ಮಾಡಿದ್ದೇವೆ ಎಂದು ತಿಳಿಸಿದರು.