SUDDIKSHANA KANNADA NEWS/ DAVANAGERE/ DATE-30-06-2025
ಕೆ ಆರ್ ಎಸ್: ಸುಳ್ಳು ಹೇಳುವ ಚಾಳಿಯಲ್ಲಿರುವ ಬಿಜೆಪಿ ಗೆ ರಾಜ್ಯದ ಜನ ಪೂರ್ಣ ಅಧಿಕಾರವನ್ನೇ ಕೊಟ್ಟಿಲ್ಲ. ಆಪರೇಷನ್ ಕಮಲ ಮಾಡಿ ಎರಡು ಬಾರಿ ಅಧಿಕಾರಕ್ಕೆ ಬಂದರು. ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ
ಕೈ ಹಾಕಿಕೊಂಡೇ ಅಧಿಕಾರಕ್ಕೆ ಬರಬೇಕು. ಸ್ವಂತ ಶಕ್ತಿಯಿಂದ ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾನು ಸುಳ್ಳು ಹೇಳಿದ್ರೆ ಜನರಿಗೆ ಗೊತ್ತಾಗಲ್ವಾ ? ಅದಕ್ಕೇ ಬಿಜೆಪಿ, ಜೆಡಿಎಸ್ ನವರು ಜನರನ್ನು ದಡ್ಡರೆಂದು ಭಾವಿಸಬಾರದು. ಜನರಿಗೆ ಸುಳ್ಳು ಹೇಳಿ ಹೋಗಬಾರದು ಎಂದ ಅವರು, ತಾಯಿ ಕಾವೇರಿಗೆ ಪೂಜೆ ಮಾಡಿ
ನಾಡಿನ ಮಳೆ, ಬೆಳೆ ಹೀಗೇ ಚನ್ನಾಗಿ ಆಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರು ಸಂಪೂರ್ಣ ಬಳಕೆ: ಸಿದ್ದರಾಮಯ್ಯ
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕಾವೇರಿ ನ್ಯಾಯ ಮಂಡಳಿ ರಾಜ್ಯಕ್ಕೆ ಹಂಚಿಕೆ ಮಾಡಿರುವ ನೀರನ್ನು ನಾವು ಸಂಪೂರ್ಣ ಬಳಕೆ ಮಾಡುತ್ತಿದ್ದು ಅದು ನಮಗೆ ಸಾಲುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
2018 ರಲ್ಲಿ ನ್ಯಾಯಮಂಡಳಿ ಆದೇಶದ ಪ್ರಕಾರ 177.25 ಟಿ ಎಂ ಸಿ ನೀರನ್ನು ಹಂಚಿಕೆ ಮಾಡಿದೆ. ಒಂದು ವರ್ಷ ಬಿಟ್ಟರೆ, ಕಳೆದ ವರ್ಷ ತಮಿಳುನಾಡಿಗೆ 305 ಟಿ ಎಂ.ಸಿ ನೀರು ಕೊಟ್ಟಿದ್ದೇವೆ ಈ ಬಾರಿಯೂ ಕೊಡುತ್ತೇವೆ ಎಂದರು. ಈ ತಿಂಗಳಲ್ಲಿ 9 ಟಿಎಂಸಿ ನೀರು ಬಿಡಬೇಕಿದ್ದರೂ ನಾವು ಈ ತಿಂಗಳಲ್ಲಿ 22 ಟಿಎಂಸಿ ನೀರು ಒದಗಿಸಿದ್ದೇವೆ. ಕಡಿಮೆ ಕೊಟ್ಟಿರುವುದು ಒಂದೋ ಎರಡು ವರ್ಷ ಮಾತ್ರ. ಆದರೆ ಬಹುತೇಕ ಹೆಚ್ಚಿನ ನೀರು ತಮಿಳುನಾಡಿಗೆ ನೀಡಿದ್ದೇವೆ ಎಂದರು.
177.25 ಟಿಎಂಸಿ ನೀರು ಕೊಡಲು ನಮ್ಮ ತಕರಾರಿಲ್ಲ
177.25 ಟಿಎಂಸಿ ನೀರು ಕೊಡಲು ನಮ್ಮ ತಕರಾರಿಲ್ಲ. ಹೆಚ್ಚಾಗಿ ನೀರು ಕೊಡುತ್ತಿದ್ದೇವೆ. ಮೇಕೆದಾಟು ಬ್ಯಾಲೆನ್ಸಿಂಗ್ ರಿಸರ್ವಾಯರ್ ನ್ನು ಅದಕ್ಕಾಗಿಯೇ ಮಾಡಬೇಕೆಂಬ ಉದ್ದೇಶವಿದೆ. ಸಂಕಷ್ಟದ ವರ್ಷಗಳಲ್ಲಿ ಮಾತ್ರ ಹಂಚಿಕೆ ಮಾಡಬೇಕು ಎಂದರು.
6% ರಷ್ಟು ನೀರಾವರಿ ಪ್ರದೇಶವನ್ನು ರಾಜ್ಯದಲ್ಲಿ ಹೆಚ್ಚಳ ಮಾಡಿದೆ
ಕೇಂದ್ರ ಸರ್ಕಾರದವರು ಮೇಕೆದಾಟು ಅಣೆಕಟ್ಟಿಗೆ ಅನುಮತಿ ಕೊಡಬೇಕು ಎಂದರು. ರಾಜ್ಯದಲ್ಲಿ ಮೇಕೆದಾಟು ಸಂಬಂಧಿಸಿದಂತೆ ಕಚೇರಿಯನ್ನು ತೆರೆಯಲಾಗಿದ್ದು ಭೂ ಸ್ವಾಧೀನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿಯೂ ಇದನ್ನು ಪ್ರಸ್ತುತಪಡಿಸಿದೆ. 6% ರಷ್ಟು ನೀರಾವರಿ ಪ್ರದೇಶವನ್ನು ರಾಜ್ಯದಲ್ಲಿ ಹೆಚ್ಚಳ ಮಾಡಿದ್ದು, ಇದಕ್ಕಾಗಿ 1ಕೋಟಿ ರೂ.ಗಳನ್ನು ಮಂಡ್ಯ ಕ್ಕೆ ವಿನಿಯೋಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ದ್ವಿಭಾಷಾ ಸೂತ್ರಕ್ಕೆ ಬದ್ಧ:
ದ್ವಿಭಾಷಾ ಸೂತ್ರಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣ ಪತ್ತೆ ಹಚ್ಚಿ ಪರಿಹಾರಕ್ಕೆ ಕ್ರಮ:
ಇತ್ತೀಚಿನ ದಿನಗಳಲ್ಲಿ ಯುವಸಮುದಾಯ ಹೃದಯಾಘಾತದಿಂದ ಮೃತಪಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಕಾರಣವೇನು ಎಂದು ಪತ್ತೆ ಹಚ್ಚಿ ಪರಿಹಾರ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.