
ಸಿಡ್ನಿ / ಡಾಕಾ: ಹಮಾಸ್ ಉಗ್ರರನ್ನು ಕೊಂಡಾಡಿದ ಹೇಳಿಕೆಗಳು ಹಾಗೂ ಹಿಂದೂ ಮತ್ತು ಯೂದಿ ಸಂಘಟನೆಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷ ಜಮಾತ್-ಎ-ಇಸ್ಲಾಮಿ ಮುಖ್ಯಸ್ಥ ಶಫೀಕುರ್ ರೆಹಮಾನ್ ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ತರಾತುರಿಯಲ್ಲಿ ಸ್ವದೇಶಕ್ಕೆ ವಾಪಸಾಗಿದ್ದಾರೆ.
5 ದಿನಗಳ ಪ್ರವಾಸಕ್ಕಾಗಿ ನವೆಂಬರ್ 20ರಂದು ಆಸ್ಟ್ರೇಲಿಯಾ ತಲುಪಿದ್ದ ಅವರು, ವಿವಾದ ಮೈಮೇಲೆಳೆದುಕೊಂಡ ಹಿನ್ನೆಲೆಯಲ್ಲಿ ನವೆಂಬರ್ 24ರಂದೇ ಅಲ್ಲಿಂದ ನಿರ್ಗಮಿಸಿ ನವೆಂಬರ್ 25ರಂದು ಬಾಂಗ್ಲಾದೇಶ ತಲುಪಿದ್ದಾರೆ.
ಸಿಡ್ನಿ ಮೂಲದ ಪ್ರತಿಷ್ಠಿತ ‘ದಿ ಆಸ್ಟ್ರೇಲಿಯನ್’ ಪತ್ರಿಕೆಯು ಶಫೀಕುರ್ ರೆಹಮಾನ್ ಅವರ ವಿವಾದಾತ್ಮಕ ಹಿಂದಿನ ಹೇಳಿಕೆಗಳನ್ನು ಬಹಿರಂಗಪಡಿಸಿ ವರದಿ ಪ್ರಕಟಿಸಿತ್ತು. ಇಸ್ರೇಲ್ ವಿರುದ್ಧ ಹೋರಾಡಿ ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವರ್ ಹಾಗೂ ಇಸ್ಮಾಯಿಲ್ ಹನಿಯೆ ವಾರಸುದಾರರನ್ನು ಅವರು ಕೊಂಡಾಡಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.
ಅಲ್ಲದೆ, ಮಹಿಳೆಯರ ಉದ್ಯೋಗ ಹಾಗೂ ಸ್ವಾತಂತ್ರ್ಯದ ಕುರಿತು ಹಿಂದೆ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನೂ ಪತ್ರಿಕೆ ಮುನ್ನೆಲೆಗೆ ತಂದಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಯೂದಿ ಮತ್ತು ಹಿಂದೂ ಸಂಘಟನೆಗಳು ರೆಹಮಾನ್ ವೀಸಾ ರದ್ದುಗೊಳಿಸುವಂತೆ ಅಲ್ಲಿನ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದವು.
ಪತ್ರಿಕೆಗೆ ಲೀಗಲ್ ನೋಟಿಸ್: ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ವರದಿ ಪ್ರಕಟಿಸಿದೆ ಎಂದು ಆರೋಪಿಸಿ ಜಮಾತ್-ಎ-ಇಸ್ಲಾಮಿ ಪಕ್ಷವು ‘ದಿ ಆಸ್ಟ್ರೇಲಿಯನ್’ ಪತ್ರಿಕೆಯ ಪ್ರಕಾಶಕರಿಗೆ ಆಸ್ಟ್ರೇಲಿಯಾದ ಮಾನನಷ್ಟ ಕಾಯ್ದೆಯಡಿ ಅಧಿಕೃತ ‘ಕನ್ಸರ್ನ್ಸ್ ನೋಟಿಸ್’ ಜಾರಿಗೊಳಿಸಿದ್ದು, 48 ಗಂಟೆಗಳಲ್ಲಿ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.
ಪ್ರವಾಸ ರದ್ದು: ಆಸ್ಟ್ರೇಲಿಯಾದ ಬಳಿಕ ಮಲೇಷ್ಯಾಕ್ಕೆ ತೆರಳಬೇಕಿದ್ದ ತಮ್ಮ ನಿಗದಿತ ಪ್ರವಾಸವನ್ನು ‘ಅಪಾಯಕಾರಿ ಹಾಗೂ ತುರ್ತು ಅಗತ್ಯ’ದ ಕಾರಣ ನೀಡಿ ಶಫೀಕುರ್ ರೆಹಮಾನ್ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.
ಪಕ್ಷದ ಸಮರ್ಥನೆ: ಪ್ಯಾಲೆಸ್ಟೀನ್ ಪರ ಧ್ವನಿ ಎತ್ತುವುದನ್ನು ಭಯೋತ್ಪಾದನೆಗೆ ಬೆಂಬಲವೆಂದು ಬಿಂಬಿಸಲಾಗುತ್ತಿದೆ ಎಂದು ಜಮಾತ್ ಸ್ಪಷ್ಟಪಡಿಸಿದೆ. ಅಲ್ಲದೆ, ಮಹಿಳೆಯರ ಕುರಿತ ವಿವಾದಾತ್ಮಕ ಪೋಸ್ಟ್ ಅನ್ನು ತನ್ನ ಖಾತೆ ಹ್ಯಾಕ್ ಆಗಿದ್ದಾಗ ಬೇರೆಯವರು ಪ್ರಕಟಿಸಿದ್ದು, ಈ ಬಗ್ಗೆ ಹಿಂದೆಯೇ ದೂರು ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಈ ಬೆಳವಣಿಗೆಯು ಬಾಂಗ್ಲಾದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಜಮಾತ್-ಎ-ಇಸ್ಲಾಮಿ ನಾಯಕರ ವಿದೇಶಿ ಪ್ರವಾಸಗಳು ವಿವಾದದ ಸ್ವರೂಪ ಪಡೆದುಕೊಂಡಿವೆ.




