SUDDIKSHANA KANNADA NEWS/ DAVANAGERE/ DATE:06-03-2025
ಬೆಂಗಳೂರು: ‘ಲಂಚ ನೀಡದೇ ರಿಯಲ್ ಎಸ್ಟೇಟ್ ಉದ್ಯಮ ನಿರ್ವಹಿಸಲು ಸಾಧ್ಯವೇ ಇಲ್ಲ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲೇ ಖಾಸಗಿ ಬಡಾವಣೆಗಳು ಸರ್ಕಾರದ ಅನುಮತಿ ಪಡೆಯಬೇಕು ಎಂಬ ಕಾಂಗ್ರೆಸ್ ಸರ್ಕಾರದ ನಿರ್ಧಾರ ಭ್ರಷ್ಟಾಚಾರವನ್ನು ವಿಧಾನ ಸೌಧದವರೆಗೂ ವಿಸ್ತರಿಸಿಕೊಳ್ಳುವ ಹುನ್ನಾರವೇ ಹೊರತು ಇದರ ಹಿಂದೆ ಯಾವ ಸದುದ್ದೇಶವೂ ಅಡಗಿಲ್ಲ ಎನ್ನುವುದು ಬಹಿರಂಗ ಸತ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ನಗರಾಭಿವೃದ್ಧಿ ಪ್ರಾಧಿಕಾರಗಳು ಬಹುತೇಕ ನಿಷ್ಕ್ರೀಯಗೊಂಡು ‘ನಿಂತ ನೀರಾಗಿವೆ’ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಬಡಾವಣೆ ನಿರ್ಮಿಸಲು ಸಾಧ್ಯವಾಗಿಲ್ಲ, ಸರ್ಕಾರ ಈ ನಿಟ್ಟಿನಲ್ಲಿ
ಅಭಿವೃದ್ಧಿ ಪ್ರಾಧಿಕಾರಗಳಿಗೆ ಚುರುಕು ಮುಟ್ಟಿಸುವ ಗೋಜಿಗೇ ಹೋಗಿಲ್ಲ,ಇದರ ಪರಿಣಾಮವೇ ಮೈಸೂರು ಮುಡಾ ಹಗರಣದ ಕುಖ್ಯಾತಿ ಸಾಗರದಾಚೆಗೂ ಸದ್ದುಮಾಡಿದೆ ಎಂದು ಆರೋಪಿಸಿದ್ದಾರೆ.
ಸೂರಿಲ್ಲದ ಜನರು ಗೃಹ ನಿರ್ಮಾಣ ಸಹಕಾರ ಸಂಘಗಳ ಮೂಲಕ ಹಾಗೂ ಖಾಸಗಿ ನಿರ್ಮಾಣಕಾರರ ಮೂಲಕ ಹೆಚ್ಚಿನ ಬೆಲೆ ತೆತ್ತಾದರೂ ಪ್ಲಾಟ್ ಅಥವಾ ನಿವೇಶನ ಪಡೆಯಲು ಪ್ರಯಾಸಪಡುತ್ತಿದ್ದರು, ಇದೀಗ
ಸರ್ಕಾರದಿಂದ ಅನುಮತಿ ಪಡೆಯಬೇಕು ಎಂಬ ನಿರ್ಧಾರ ಪ್ರಕಟಿಸುವ ಮೂಲಕ ‘ಅಗತ್ಯ ಅನುಮತಿಗಾಗಿ ಸದ್ಯದ ವ್ಯವಸ್ಥೆಯಲ್ಲೇ ಹೆಣಗಾಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮವನ್ನು ಇನ್ನಷ್ಟು ಉಸಿರುಗಟ್ಟಿಸಿ
ಅಂಕುಶ ಹಾಕಲು ಹೊರಟಿರುವುದರ ಉದ್ದೇಶ ಏನೆಂಬುದನ್ನು ಸರಕಾರ ಜನರಿಗೆ ತಿಳಿಸಬೇಕಿದೆ, ಈ ನಿಲುವಿನಿಂದಾಗಿ ಸ್ವಂತ ಸೂರು ಹೊಂದಲು ಪರದಾಡುತ್ತಿರುವ ವಸತಿ ಹೀನ ಜನರ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ, ವಸೂಲಿ ದಾರಿ ಯಾವುದು ಎಂದು ಹುಡುಕುವುದಷ್ಟೇ ಈ ಸರ್ಕಾರದ ನಿತ್ಯ ಕಾಯಕವಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರಗಳ ಅಸ್ತಿತ್ವವನ್ನು ನಾಚಿಸುವ ರೀತಿಯಲ್ಲಿ ಕೈಗೊಂಡಿರುವ ಈ ನಿರ್ಧಾರವನ್ನು ಸರ್ಕಾರ ಈ ಕೂಡಲೇ ಕೈಬಿಡಲಿ. ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕ ಸೂರು ರಹಿತ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರಗಳಲ್ಲಿ ನಿವೇಶನ ಲಭಿಸುವಂತೆ ಬಡಾವಣೆಗಳ ರಚನೆಗೆ ಚಾಲನೆ ನೀಡಲಿ, ಅದು ಸಾಧ್ಯವಾಗದಿದ್ದರೆ ನಗರಾಭಿವೃದ್ಧಿ ಪ್ರಾಧಿಕಾರಗಳು ಸ್ವಂತ ಸಂಪನ್ಮೂಲವಿಲ್ಲದೆ ಸರ್ಕಾರದ ಅನುದಾನದಿಂದ ಸಂಬಳ ಹಾಗೂ ಇತರ ವೆಚ್ಚಗಳಿಗಾಗಿ ಜನರ ತೆರಿಗೆಯ ಹಣ ನುಂಗಿ ಹಾಕುವ ಕೇಂದ್ರಗಳಾಗಿ ಕುಳಿತಿವೆ, ಈ ನಿಟ್ಟಿನಲ್ಲಿ ಪ್ರಾಧಿಕಾರಗಳ ಅಸ್ತಿತ್ವ ಬೇಕೆ ?ಎನ್ನುವ ಪ್ರಶ್ನೆ ಸರ್ಕಾರದ ಸದ್ಯದ ನಿರ್ಧಾರದಿಂದ ಉದ್ಭವವಾಗಿದೆ ಎಂದು ಆರೋಪಿಸಿದ್ದಾರೆ.