SUDDIKSHANA KANNADA NEWS/ DAVANAGERE/ DATE:26-02-2025
ದಾವಣಗೆರೆ: ಇಸ್ಪೀಟ್ ಜೂಜಾಟದ ಮೇಲೆ ದಾಳಿ ನಡೆಸಿದ ಕೆಟಿಜೆ ನಗರ ಪೊಲೀಸರು, 22 ಜನರನ್ನು ವಶಕ್ಕೆ ಪಡೆದು 1,04,110 ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ನಗರದ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಲಾಯರ್ ರಸ್ತೆಯ ಕೊನೆಯಲ್ಲಿ ಮುತ್ತೂಟ್ ಗೋಲ್ಡ್ ಪಾಯಿಂಟ್ ನ ಮೇಲ್ಭಾಗದ ಮಹಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ ಹಾಗೂ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಎಸ್. ಸುನೀಲ್ ಕುಮಾರ ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ಮಾಡಿತು.
ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 21 ಜನರನ್ನು ವಶಕ್ಕೆ ಪಡೆದು ಆರೋಪಿತರಿಂದ ಇಸ್ಪೀಟ್ ಜೂಜಾಟ ಆಡಲು ತೊಡಗಿಸಿದ್ದ 1,04,110 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದಿದೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರು ಮತ್ತು ಮನೆ ಬಾಡಿಗೆ ನೀಡಿ ಅಕ್ರಮ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟ ಮನೆಯ ಮಾಲೀಕರ ವಿರುದ್ದ ಕೆಟಿಜೆನಗರ ಪೊಲೀಸ್ ಠಾಣೆಯಲ್ಲಿ ಕಲಂ:79 80 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.