
ಕೆನಡಾ: ಕೆನಡಾದ ಬ್ರಿಟಿಷ್ ಕೊಂಬಿಯಾ ಪ್ರಾಂತ್ಯದ ಸರ್ರೆ ನಗರದಲ್ಲಿ ವಾಲ್‌ಮಾರ್ಟ್ ಸ್ಟೋರ್‌ನ ಪಾರ್ಕಿಂಗ್ ಸ್ಥಳದಲ್ಲಿ 23 ವರ್ಷದ ಭಾರತೀಯ ಮೂಲದ ಯುವಕ ಹಾಗೂ ಆತನ 24 ವರ್ಷದ ಗೆಳತಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತರನ್ನು ಡೆಲ್ಟಾ ನಿವಾಸಿಗಳಾದ ಗಗನ್‌ಪ್ರೀತ್ (ಗ್ಯಾರಿ) ರೆಹಾಲ್ (23) ಹಾಗೂ ಸುಖ್‌ಜೀತ್ ಕೌರ್ (24) ಎಂದು ಗುರುತಿಸಲಾಗಿದೆ. ಇದು ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಪೂರ್ವಯೋಜಿತ ದಾಳಿಯಾಗಿರಬಹುದು ಎಂದು ಕೆನಡಾದ ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಘಟನೆಯ ವಿವರ: ರಾತ್ರಿ 10.38ರ ಸುಮಾರಿಗೆ ವಾಲ್‌ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಗುಂಡೇಟಿಗೆ ತುತ್ತಾದ ದಂಪತಿಯನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸುಟ್ಟುಹೋದ ವಾಹನ ಪತ್ತೆ: ಹತ್ಯೆ ನಡೆದ ಕೆಲವೇ ನಿಮಿಷಗಳಲ್ಲಿ ಸಮೀಪದ ಪ್ರದೇಶದಲ್ಲಿ ಕಾರೊಂದನ್ನು ಸುಟ್ಟುಹಾಕಲಾಗಿದ್ದು, ಇದು ಶಂಕಿತರು ಬಳಸಿರುವ ವಾಹನವಾಗಿರಬಹುದು ಎಂದು ಹತ್ಯೆ ತನಿಖಾ ತಂಡ (IHIT) ಪತ್ತೆಹಚ್ಚಿದೆ.
ತನಿಖೆ ಮತ್ತು ಹಿನ್ನೆಲೆ: ಮೃತ ಯುವಕ ರೆಹಾಲ್ ಈ ಹಿಂದೆ ಕೆಲವು ಶಸ್ತ್ರಾಸ್ತ್ರ ಅಪರಾಧ ಪ್ರಕರಣಗಳಲ್ಲಿ ಪೊಲೀಸ್ ದಾಖಲೆ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಇಲ್ಲಿಯವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.
ಮಗನನ್ನು ಕಳೆದುಕೊಂಡಿರುವ ಯುವಕನ ತಂದೆ (ಟ್ರಕ್ ಡ್ರೈವರ್), ತಾವು Calgary ನಿಂದ ವಾಪಸ್ ಬರುವಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಕಣ್ಣೀರಿಟ್ಟಿದ್ದು, ಕುಟುಂಬಸ್ಥರು ಆಘಾತದಲ್ಲಿದ್ದಾರೆ.




