SUDDIKSHANA KANNADA NEWS/ DAVANAGERE/ DATE-07-05-2025
ದಾವಣಗೆರೆ: ಜಮ್ಮುಕಾಶ್ಮೀರ ಪಹಲ್ಗಾಮ್ ನಲ್ಲಿ ಅಮಾಯಕ 26 ಪ್ರವಾಸಿಗರ ಹತ್ಯೆ ಮಾಡಿದ್ದ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ನೆಲೆ ಮೇಲೆ ದಾಳಿ ಮಾಡಿರುವ ದಿನ ಐತಿಹಾಸಿಕ ದಿನ ಎಂದು ಜವಾಹರ್ ಬಾಲ್ ಮಂಚ್ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ಬಣ್ಣಿಸಿದ್ದಾರೆ.
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ನೆಲಕ್ಕೆ ನುಗ್ಗಿ ಉಗ್ರರಿಗೆ ತರಬೇತಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದ ಉಗ್ರ ತಾಣಗಳನ್ನು ಧ್ವಂಸ ಮಾಡುವ ಮೂಲಕ ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಭಾರತ ಸೇನೆಯು ತಕ್ಕ ಉತ್ತರ ನೀಡಿದೆ. ಉಗ್ರಗಾಮಿಗಳ ನೆಲೆಗಳನ್ನು ಧ್ವಂಸ ಮಾಡುವ ಜೊತೆಗೆ ಉಗ್ರರ ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡ ಭಾರತದ ಹೆಮ್ಮೆಯ ಧೀರರ ಪರಾಕ್ರಮಕ್ಕೆ ಅಭಿನಂದನೆ ಸಲ್ಲಿಸಬೇಕು. ಎಲ್ಲರೂ ಗೌರವಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.
ಮೊದಲಿನಿಂದಲೂ ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಲೇ ಇದೆ. ಅಮಾಯಕರನ್ನು ಕೊಲ್ಲಲು ಬಂದ ಉಗ್ರರ ಹಿಡಿದುಕೊಡುವ ಬದಲು ಸಹಾಯ ಮಾಡುತ್ತಿರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಮತ್ತಷ್ಟು ತಕ್ಕ ಪಾಠ ಕಲಿಸಬೇಕು. ಇನ್ನು ಮುಂದಾದರೂ ಪಾಕಿಸ್ತಾನ ಭಯೋತ್ಪಾದನೆ ಮಟ್ಟಹಾಕುವತ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ವರ್ಷಗಳಲ್ಲಿ ವಿಶ್ವದ ಭೂಪಟದಲ್ಲೇ ಈ ರಾಷ್ಟ್ರ ಇಲ್ಲವಾಗಿಬಿಡಬಹುದು ಎಂದು ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.
ದೇಶದ ಸೇನೆಯು ಕ್ಷಿಪಣಿ ದಾಳಿ ನಡೆಸಿ ಉಗ್ರರ ನೆಲೆ ಧ್ವಂಸಗೊಳಿಸುವ ಜೊತೆಗೆ ತಕ್ಕ ಉತ್ತರ ನೀಡಿರುವುದು ಐತಿಹಾಸಿಕ ಕ್ಷಣ ಎಂದರೆ ತಪ್ಪಾಗಲಾರದು. ಎಲ್ಲಾ ಸೈನಿಕರಿಗೂ ಸಲಾಂ ಹೇಳಲೇಬೇಕು ಎಂದು ಅವರು ಹೇಳಿದ್ದಾರೆ.