SUDDIKSHANA KANNADA NEWS/ DAVANAGERE/ DATE-07-05-2025
ದಾವಣಗೆರೆ: ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಸಲಾಂ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯ ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಸೇನೆಯು ಪಾಕ್ ನೆಲಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿರುವುದು ಸಂತಸದ ವಿಚಾರ. ಇಡೀ ಭಾರತ ದೇಶವೇ ಸಂಭ್ರಮದಲ್ಲಿದೆ. ಆಪರೇಷನ್ ಸಿಂಧೂರ ನಡೆಸಿ, ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ. ಇನ್ನು ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ 26 ಮಂದಿ ಕುಟುಂಬಗಳು, ಸಂಬಂಧಿಕರಿಗೆ ಸ್ವಲ್ಪ ನೆಮ್ಮದಿ ತಂದಿದೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆಗೆ ಅವಕಾಶ ನೀಡಬಾರದು. ಸಂಪೂರ್ಣವಾಗಿ ಮಟ್ಟಹಾಕಲು ಕೇಂದ್ರ ಸರ್ಕಾರ ಮುಂದಾಗಲಿದೆ. ಇದು ಉತ್ತಮ ನಡೆ ಎಂದಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸೇನೆಯ ಪರಾಕ್ರಮ ಕೊಂಡಾಡಿದ್ದಾರೆ. ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಭಯೋತ್ಪಾದನೆ ನಿರ್ಮೂಲನೆಗೆ ಕೇಂದ್ರ ಸರ್ಕಾರ, ಭಾರತೀಯ ಸೇನೆ ತೆಗೆದುಕೊಳ್ಳುವ
ಕ್ರಮಗಳಿಗೆ ಸಹಮತ, ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ. ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರತನ ಖುಷಿಯ ವಿಚಾರ. ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನ ಮಾಡುವ ಬೇರೆ ರಾಷ್ಟ್ರಗಳಿಗೂ ಎಚ್ಚರಿಕೆ ಗಂಟೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಭವಿಷ್ಯದಲ್ಲಿ ಭಯೋತ್ಪಾದಕರಿಂದ ಅಮಾಯಕರು ಬಲಿಯಾಗದಂತೆ ನೋಡಿಕೊಳ್ಳಬೇಕಿದೆ. ಉಗ್ರರ ಸಂಪೂರ್ಣ ನಿರ್ಮೂಲನೆ ಆಗಬೇಕಿದೆ. ಉಗ್ರರ ನೆಲೆಗಳ ಮೇಲೆ ಮಾತ್ರ ಭಾರತೀಯ ಸೇನೆ ದಾಳಿ ನಡೆಸಿದೆ. ಸಂಪೂರ್ಣ ಸ್ವಾತಂತ್ರ್ಯವನ್ನು
ಭಾರತೀಯ ಸೇನೆಗೆ ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.