SUDDIKSHANA KANNADA NEWS/ DAVANAGERE/ DATE:22-02-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಾನು ಎಂದಿಗೂ ಟಿಕೆಟ್ ಕೇಳಿಲ್ಲ. ಅವರಾಗಿಯೇ ನೀಡುತ್ತಾ ಬಂದಿರೋದು. ಮುಂದೆಯೂ ನನಗೆ ಟಿಕೆಟ್ ಸಿಗುತ್ತೆ, ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಪುತ್ರ ಅನಿತ್ ಯಾಕೆ ಲೋಕಸಭಾ ಸದಸ್ಯನಾಗಬಾರದು ಎಂದು ದಾವಣಗೆರೆ ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಪ್ರಶ್ನಿಸಿದರು.
ಮಾಧ್ಯಮವದರ ಜೊತೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಳೀಯರಲ್ಲದವರಿಗೆ ಟಿಕೆಟ್ ನೀಡಬಾರದು ಎಂಬ ಆಗ್ರಹ ಕೇಳಿ ಬರುತಿತ್ತು. ಆದ್ರೆ, ಈಗ ಬಿಜೆಪಿಯಲ್ಲಿಯೂ ಶುರುವಾಗಿದೆ. ನಮ್ಮಲ್ಲಿರುವ
ಕೆಲವರಿಗೆ ನಾನು ಬೇಕಾಗಿಲ್ಲ, ಅದಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ನನ್ನ ಪುತ್ರ ಅನಿತ್ ಯಾಕೆ ಎಂಪಿ ಆಗಬಾರದು. ದೇವರ ಕೃಪೆ ಇದ್ದರೆ ಖಂಡಿತ ಆಗುತ್ತಾನೆ. 2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಸ್ಪರ್ಧೆ ಮಾಡಲು ಯಾರಿಗೆ ಟಿಕೆಟ್ ನೀಡಿದರೂ ಸ್ವಾಗತಿಸುತ್ತೇನೆ. ಈಗ
ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ. ಓಡಾಡುತ್ತಿದ್ದೇನೆ. ಮತ್ತೆ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಜನರು ಆಶೀರ್ವಾದ ಮಾಡಿದರೆ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಪುತ್ರನಿಗೆ ಟಿಕೆಟ್ ನೀಡುವ ವಿಚಾರ ಕುರಿತಂತೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಯಾರ ಮೇಲೆ ಒತ್ತಡ ಹಾಕಿಲ್ಲ, ಹಾಕುವುದೂ ಇಲ್ಲ. ಅದು ಭಗವಂತನ ಇಚ್ಚೆಯಾಗಿದೆ. ಹಿಂದೆಯೂ ಜನರು ನನಗೆ ಆಶೀರ್ವಾದ ಮಾಡಿದ್ದಾರೆ, ಮುಂದೆಯೂ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ನನಗಿದೆ. ನಾನೆಂದೂ ಟಿಕೆಟ್ ಕೇಳುವುದಕ್ಕೆ ಹೋಗಿಲ್ಲ. ಟಿಕೆಟ್ ಬೇಕು ಎನ್ನುವವರು ಕೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಪೈಪೋಟಿ ಯಾವಾಗಲೂ ಇದ್ದೇ ಇರುತ್ತದೆ. ಈ ಬಾರಿ ಸ್ವಲ್ಪ ಹೆಚ್ಚಾಗಿದೆ. ಯಾರಿಗೂ ಕೊಟ್ಟರೂ ಕೆಲಸ ಮಾಡುತ್ತೇನೆ. ಯಾರನ್ನು ಹೈಕಮಾಂಡ್ ಅಭ್ಯರ್ಥಿ ಎಂದು ಘೋಷಿಸುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.
ನಾನು ದೆಹಲಿಗೆ ಹೋಗಿದ್ದು ಟಿಕೆಟ್ ಕೇಳಲು ಅಲ್ಲ. ರಾಷ್ಟ್ರೀಯ ಕಾನ್ಫರೆನ್ಸ್ ಇತ್ತು. ಇದಕ್ಕಾಗಿ ಅಲ್ಲಿಗೆ ಹೋಗಿ ಬಂದಿದ್ದೇನೆ. ಜಿಲ್ಲಾ ಸಮಿತಿ, ರಾಜ್ಯ ಸಮಿತಿ ಹಾಗೂ ವರಿಷ್ಟರು ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರಿಯಾಗಿ ಜನರಿಗೆ ಅಕ್ಕಿಯನ್ನೇ ವಿತರಿಸಿಲ್ಲ. ಭಾರತ್ ಅಕ್ಕಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಮೊದಲು ಹತ್ತು ಕೆಜಿ ಅಕ್ಕಿ ನೀಡಲಿ, ಆಮೇಲೆ ಕೇಂದ್ರದತ್ತ ಬೊಟ್ಟು ತೋರಿಸಲಿ ಎಂದು ಸಚಿವ ಕೆ. ಹೆಚ್. ಮುನಿಯಪ್ಪರ ಆರೋಪಕ್ಕೆ ಸಿದ್ದೇಶ್ವರ ಅವರು ಖಾರವಾಗಿ ಪ್ರತಿಕ್ರಿಯಿಸಿದರು.