ಹೈದರಾಬಾದ್: ಹೈದರಾಬಾದ್ನ ಮಾತುರಿ ವೆಂಕಟ ಸುಬ್ಬರಾವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ದಸರಾ ಪೂರ್ವಭಾವಿ ಡಾಂಡಿಯಾ ಕಾರ್ಯಕ್ರಮದಲ್ಲಿ ಭೀಕರ ದುರ್ಘಟನೆ ಸಂಭವಿಸಿದೆ. ವೇದಿಕೆಗೆ ಅಳವಡಿಸಿದ್ದ ಬೃಹತ್ ಸ್ಟೀಲ್ ಲೈಟಿಂಗ್ ಆರ್ಚು ಕುಸಿದುಬಿದ್ದ ಪರಿಣಾಮ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಇತರ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಕಾಲೇಜು ಆವರಣದಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಡಾಂಡಿಯಾ ನೃತ್ಯದಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ನಡೆಯಿತು. ಶನಿವಾರ ಸಂಜೆ ಬೀಸಿದ ತೀವ್ರ ಗಾಳಿಯ ಕಾರಣದಿಂದ ವಿದ್ಯುತ್ ದೀಪಗಳ ಅಲಂಕಾರಕ್ಕಾಗಿ ನಿಲ್ಲಿಸಲಾಗಿದ್ದ ದೊಡ್ಡದಾದ ಉಕ್ಕಿನ ಚೌಕಟ್ಟು ಏಕಾಏಕಿ ಕುಸಿದು ಬಿದ್ದಿದೆ. ಈ ಅನಿರೀಕ್ಷಿತ ದುರಂತದಿಂದ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಹಾಗೂ ಗೊಂದಲ ಉಂಟಾಯಿತು.
ಈ ಅಪಘಾತದಲ್ಲಿ ಎಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (EEE) ವಿಭಾಗದ ವಿದ್ಯಾರ್ಥಿನಿ ಸೋನಾ ನಾರಾಯಣ ದಾಸ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ವಿದ್ಯಾರ್ಥಿನಿಯ ಸಾವಿಗೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಅವರು, ಗಾಯಗೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಈ ದುರ್ಘಟನೆಗೆ ಕಾರಣರಾದವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಕಡಕ್ ಆದೇಶ ಹೊರಡಿಸಿದ್ದಾರೆ.





Leave a comment