Home ಕ್ರೈಂ ನ್ಯೂಸ್ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ: ₹1 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದ 6 ಆರೋಪಿಗಳ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ: ₹1 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದ 6 ಆರೋಪಿಗಳ ಬಂಧನ!

Share
ಹೈದರಾಬಾದ್‌
Share

ಹೈದರಾಬಾದ್: ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಿಂದ ಅಪಹರಿಸಲಾಗಿದ್ದ ಏಳು ದಿನಗಳ ಹೆಣ್ಣು ಮಗುವನ್ನು ಹೈದರಾಬಾದ್ ಪೊಲೀಸರು ಯಶಸ್ವಿಯಾಗಿ ರಕ್ಷಿಸಿದ್ದು, ಅಪಹರಣದ ರೂವಾರಿಯ ಸೇರಿದಂತೆ ಒಟ್ಟು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

ಬಿಹಾರದ ಭಾಗಲ್ಪುರ್ ಮೂಲದ ಸೋನಿ ಕುಮಾರಿ ಮತ್ತು ಅಮರೇಶ್ ಕುಮಾರ್ ದಂಪತಿ ನವೆಂಬರ್ 13ರಂದು ಗಾಂಧಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನವೆಂಬರ್ 20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಸಿದ್ಧತೆ ನಡೆಸುತ್ತಿದ್ದಾಗ, ಸರ್ಕಾರಿ ಸೌಲಭ್ಯದ ನೆಪವೊಡ್ಡಿ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿದ್ದಳು.

ಅಪಹರಣದ ಜಾಲ: ಸರ್ಕಾರಿ ಯೋಜನೆಗಳ ಆರ್ಥಿಕ ನೆರವಿನ ಭರವಸೆ ನೀಡಿ, ತಂದೆಯ ಬಳಿ ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ ಸಹಿ ಪಡೆದ ಆರೋಪಿಗಳು, ಆತನನ್ನು ಬೇರೆಡೆ ಕಳುಹಿಸಿ ಸ್ಕೂಟರ್‌ನಲ್ಲಿ ಮಗುವನ್ನು ಅಪಹರಿಸಿ ಪರಾರಿಯಾಗಿದ್ದರು.

₹1 ಲಕ್ಷಕ್ಕೆ ಮಾರಾಟ ಯತ್ನ: ಮಕ್ಕಳಿಲ್ಲದ ಶಮೀನಾ ಬೇಗಂ ಮತ್ತು ಇಮ್ರಾನ್ ದಂಪತಿಗೆ ₹1 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿದ್ದು, ಸಮಾಜ ಸೇವಕಿ ಹೇಮಲತಾ ಮುಂಗಡವಾಗಿ ₹50,000 ಪಡೆದಿರುವುದು ತನಿಖೆಯಿಂದ ಬಯಲಾಗಿದೆ.

ಪೊಲೀಸ್ ಕಾರ್ಯಾಚರಣೆ: ಸೆಕೆಂದರಾಬಾದ್ ವಲಯ ಹಾಗೂ ಟಾಸ್ಕ್‌ಫೋರ್ಸ್‌ನ 10ಕ್ಕೂ ಹೆಚ್ಚು ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹೇಮಲತಾ, ರಿಜ್ವಾನ್, ನಸ್ರಿನ್, ಮೊಹಮ್ಮದ್ ಜಾನಿ, ಶಮೀನಾ ಬೇಗಂ ಹಾಗೂ ಇಮ್ರಾನ್ ಸೇರಿದಂತೆ ಆರೂ ಜನ ಆರೋಪಿಗಳನ್ನು ಬಂಧಿಸಿವೆ.

ಮಗು ಸುರಕ್ಷಿತವಾಗಿ ಪೋಷಕರ ಬಳಿಗೆ ಮರಳಿದ್ದು, ಹೈದರಾಬಾದ್ ಪೊಲೀಸರ ತ್ವರಿತ ಮತ್ತು ಸಾಹಸಮಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Share
Related Articles