SUDDIKSHANA KANNADA NEWS/ DAVANAGERE/ DATE:06-02-2025
ದಾವಣಗೆರೆ: ಮಹಿಳೆಯರು, ಯುವತಿಯರು ಹಾಗೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಚನ್ನಗಿರಿ ಮೆಡಿಕಲ್ ಶಾಪ್ ನ ಮಾಲೀಕ ಅಮ್ಜದ್ ನ ವಿರುದ್ದ ಇದುವರೆಗೆ ಯಾವುದೇ ಸಂತ್ರಸ್ತೆಯರು ದೂರು ನೀಡಿಲ್ಲ. ವಿಡಿಯೋದಲ್ಲಿರುವ ಸಂತ್ರಸ್ತೆಯರ ಗುರುತಿಸುವುದು ಸವಾಲಿನ ಕೆಲಸ ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರಿಗೆ ಇದೇ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಜಿಲ್ಲಾ ಸಿಇಎನ್ ಠಾಣೆಯ ತಂಡವು ವಿಡಿಯೋಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.
ಅಮರ್ ಔಷಧಿ ಅಂಗಡಿ ಮಾಲೀಕ ಅಮ್ಜದ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಅಮ್ಜದ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ನೇತೃತ್ವದ ತಂಡ ಚನ್ನಗಿರಿಯ ಮನೆ, ಶಾಪ್ ಗೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದೆ. ಔಷಧಿ ಅಂಗಡಿ ಹಾಗೂ ಬಾಡಿಗೆ ಮನೆಗೆ ತೆರಳಿ ಲ್ಯಾಪ್ ಟಾಪ್, ಮೊಬೈಲ್, ಹ್ಯಾಂಡಿಕ್ಯಾಮ್, ಚಿಪ್ ಸೇರಿದಂತೆ ಹತ್ತಕ್ಕೂ ಹೆಚ್ಚು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಮಾ ಪ್ರಶಾಂತ್ ತಿಳಿಸಿದರು.
ಯಾರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವಿಡಿಯೋಗಳನ್ನು ಶೇರ್ ಮಾಡಬಾರದು. ಅಮ್ಜದ್ ವಿಡಿಯೋಗಳನ್ನು ಆತನ ಕುಟುಂಬದವರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕುರಿತಂತೆಯೂ ತನಿಖೆ ಮುಂದುವರಿದಿದೆ ಎಂದು ಹೇಳಿದರು.