SUDDIKSHANA KANNADA NEWS/ DAVANAGERE/DATE:05_08_2025
ದಾವಣಗೆರೆ: ಇಂದಿನಿಂದ ಕೆಎಸ್ ಆರ್ ಟಿಸಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಕರೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ಮಕ್ಕಳಿಗೆ ಸಂಚಾರದ ಪರ್ಯಾಯ ವ್ಯವಸ್ಥೆಗಾಗಿ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನು ನಗರದ ಕೆ ಎಸ್ ಆರ್ ಟಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ.
ಈ ಸುದ್ದಿಯನ್ನೂ ಓದಿ: ಖಾಸಗಿ ಕಂಪೆನಿಗೆ ಕಡಿಮೆ ಬೆಲೆಗೆ ಜಮೀನು ನೀಡಿರುವುದರ ಹಿಂದೆ ಸಚಿವ, ಸಂಸದರ ಕೈವಾಡ ಶಂಕೆ: ಯಶವಂತರಾವ್ ಜಾಧವ್ ಸ್ಫೋಟಕ ಆರೋಪ!
ದಿನವೂ ಗಿಜಿಗುಡುತ್ತಿದ್ದ ಕೆ ಎಸ್ ಆರ್ ಟಿ ಸಿ ನಿಲ್ದಾಣ ಬಸ್ ಚಾಲಕರು, ಕಂಡಕ್ಟರ್, ಜನರಿಲ್ಲದೇ ಖಾಲಿ ಹೊಡೆಯುತ್ತಿದೆ.
ನಗರದ ರೈಲ್ವೇ ನಿಲ್ದಾಣದ ಬಳಿ ಇರುವ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ವೇತನ ಪರಿಷ್ಕರಣೆ ಮತ್ತು ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಕೆಎಸ್‌ಆರ್‌ಟಿಸಿ ನೌಕರರು ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರದಿಂದ ಕರೆ ನೀಡಿರುವುದರಿಂದ ಜಿಲ್ಲೆಯಲ್ಲಿ ಸಂಚಾರಕ್ಕೆ ತೊಂದರೆಯುಂಟಾಗದಂತೆ ಖಾಸಗಿ ಬಸ್ ಮಾಲೀಕರೊಂದಿಗೆ ಜಂಟಿ ಮಾತುಕತೆ ನಡೆಸಿ ಸಾರ್ವಜನಿಕರಿಗೆ, ಮಹಿಳೆಯರಿಗೆ, ವೃದ್ಧರು, ಗರ್ಭಿಣಿ ಮಹಿಳೆಯರಿಗೆ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ಮಾರ್ಗಗಳಿಗೆ ಬಸ್ ಸಂಚಾರಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 126 ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿದ್ದು, ಮುಷ್ಕರದ ವೇಳೆ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ 56 ಸಂಚಾರಿ ಮಾರ್ಗಗಳಲ್ಲಿ ತೋದರೆಯುಂಟಾಗಬಹುದು ಎಂದು ಗುರುತಿಸಲಾಗಿದೆ.
ಹಾಗಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ದಾವಣಗೆರೆಗೆ ಸಂಬಂಧಿಸಿದಂತೆ 30 ಖಾಸಗಿ ಬಸ್ ಅವಶ್ಯಕತೆ ಇದ್ದು, 261 ಬಾರಿ ಸಂಚಾರಕ್ಕೆ ಬೇಡಿಕೆ ಇದೆ. ಜಗಳೂರು ತಾಲ್ಲೂಕಿಗೆ 5, ಹರಿಹರ -50 ಹಾಗೂ ಹೊನ್ನಾಳಿ ತಾಲ್ಲೂಕಿಗೆ 10 ಬಸ್‌ಗಳು ಸೇರಿ ಒಟ್ಟು 95 ಖಾಸಗಿ ಬಸ್‌ಗಳ ಅವಶ್ಯಕತೆ ಇದ್ದು, ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಖಾಸಗಿ ಬಸ್ ಮಾಲೀಕರು ಸುಗಮ ಸಂಚಾರ ವ್ಯವಸ್ಥೆಗೆ ಸಹಕರಿಸುವುದಾಗಿ ಭರವಸೆ ನೀಡಿದ್ದು ಜಿಲ್ಲಿಯಲ್ಲಿ ಯಾವುದೇ ರೀತಿಯ ತೊಂದರೆಗಳಿಗೆ ಅವಕಾಶವಿಲ್ಲದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದ ಅವರು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 2.10 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಅದಕ್ಕೆ ಅನುಗುಣವಾಗಿ ಪ್ರಾಥಮಿಕವಾಗಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಉದ್ಭವವಾಗದಂತೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದರೆ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು ಎಂದರು. ಅಷ್ಟೇ ಅಲ್ಲದೇ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ಹೆಚ್ಚಿನ ಮಾಹಿತಿಗಾಗಿ ಈಗಾಗಲೇ ಸಹಾಯವಾಣಿ ಸಂಖ್ಯೆಯನ್ನು ಸಹ ಆರಂಭಿಸಲಾಗಿದೆ. ಕೆಎಸ್‌ಆರ್‌ಟಿಸಿ ನಿಯಂತ್ರಣ
ಕೊಠಡಿ ದೂರವಾಣಿ ಸಂಖ್ಯೆ 7022030175, ಪ್ರಾದೇಶಿಕ ಸಾರಿಗೆ ಕಚೇರಿ – 08192-259848, ಪೊಲೀಸ್ ಕಚೇರಿ ನಿಯತ್ರಣ ಕೊಠಡಿ – 9480803200 ಹಾಗೂ ಜಿಲ್ಲಾಧಿಕಾರಿಗಳ ಕಚೇರಿ – 1077 ಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಕುಮಾರ್ ಎಸ್ ಬಸಾಪುರ, ಕೆಎಸ್ ಆರ್ ಟಿಸಿ ಸಂಚಾರ ನಿಯಂತ್ರಕ ಫಕೃದ್ಧೀನ್ ಇದ್ದರು.